ಕಾಸರಗೋಡು, ಅ.20 (DaijiworldNews/TA): ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡವಾಗಿ ಸಂಗ್ರಹಿಸಿದ ಹಣದಲ್ಲಿ ₹2.96 ಲಕ್ಷ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರ ವಿರುದ್ಧ ಕೇರಳದ ವಿಜಿಲೆನ್ಸ್ ಆ್ಯಂಡ್ ಆ್ಯಂಟಿ ಕರಪ್ಷನ್ ಬ್ಯೂರೊ ಪ್ರಕರಣ ದಾಖಲಿಸಿದೆ.

ಕೊಲ್ಲಂ ಮೂಲದ ಅರುಣ್ ಮೋಹನ್ ಪ್ರಕರಣದ ಆರೋಪಿಯಾಗಿದ್ದು, ಕಾಸರಗೋಡಿನ ಬೇಕಲ, ಮೇಲ್ಪರಂಬ ಮತ್ತು ವೆಳ್ಳರಿಕುಂಡು ಪೊಲೀಸ್ ಠಾಣೆಗಳಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿನ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. 2023ರಿಂದ 2025ರ ಅವಧಿಯಲ್ಲಿ ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಗ್ರಹಿಸಲಾದ ದಂಡದ ಹಣದಲ್ಲಿ ರೂ. 2.96 ಲಕ್ಷ ಅಕ್ರಮ ನಡೆದಿದೆ ಎಂಬುದು ವಿಜಿಲೆನ್ಸ್ನ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಾಹನ ಮಾಲಕರು ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ಪಾವತಿಸಿದ್ದರೂ, ಇ-ಚಲನ್ ವ್ಯವಸ್ಥೆಯಲ್ಲಿ ದಂಡ ಬಾಕಿ ಇರುವುದಾಗಿ ದಾಖಲಾಗಿದ್ದ ಪ್ರಕರಣಗಳು ಪರಿಶೀಲನೆ ವೇಳೆ ಗಮನಕ್ಕೆ ಬಂದಿವೆ. ದಂಡದ ಹಣವನ್ನು ಸ್ವೀಕರಿಸಿದ ಬಳಿಕವೂ ಅದನ್ನು ಅಧಿಕೃತ ದಾಖಲೆಗಳಲ್ಲಿ ಸರಿಯಾಗಿ ನಮೂದಿಸಿರಲಿಲ್ಲ ಎನ್ನಲಾಗಿದೆ.
ಅರುಣ್ ಮೋಹನ್ ಅವರು ಬೇಕಲ, ಮೇಲ್ಪರಂಬ ಮತ್ತು ವೆಳ್ಳರಿಕುಂಡು ಪೊಲೀಸ್ ಠಾಣೆಗಳಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಅವಧಿಯ ವ್ಯವಹಾರಗಳ ಬಗ್ಗೆ ತನಿಖೆ ಕೇಂದ್ರೀಕೃತವಾಗಿದೆ. ಅವರ ಬ್ಯಾಂಕ್ ಖಾತೆಗಳನ್ನೂ ಪರಿಶೀಲನೆಯ ವ್ಯಾಪ್ತಿಗೆ ಸೇರಿಸಲಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಅರುಣ್ ಮೋಹನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.