ಉಡುಪಿ/ಮಂಗಳೂರು, ಅ.24 (DaijiworldNews/AA): ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ಮಧ್ಯಾಹ್ನ ಮೋಡ ಕವಿದ ವಾತಾವರಣವಿತ್ತು. ನಂತರ ಆರಂಭವಾದ ತುಂತುರು ಮಳೆ, ಸಂಜೆಯಾಗುತ್ತಿದ್ದಂತೆ ಗುಡುಗು ಮತ್ತು ಮಿಂಚಿನ ಸಹಿತ ಭಾರಿ ಮಳೆ ಸುರಿಯಿತು.


ಮಧ್ಯಾಹ್ನ ಆರಂಭವಾದ ತುಂತುರು ಮಳೆಯು ಸಂಜೆ 4 ರ ಸುಮಾರಿಗೆ ಜೋರಾಯಿತು. ಉಡುಪಿ ನಗರದ ಹಲವು ಪ್ರದೇಶಗಳಲ್ಲಿ ಮಳೆನೀರು ಸರಿಯಾಗಿ ಹರಿದು ಹೋಗದೆ ಚರಂಡಿಗಳಿಂದ ರಸ್ತೆಗಳ ಮೇಲೆ ಹರಿದಿದ್ದರಿಂದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಂಕಷ್ಟ ಎದುರಾಯಿತು.
ಹಿರಿಯಡ್ಕ, ಓಂತಿಬೆಟ್ಟು, ಆತ್ರಾಡಿ, ಕಲ್ಯಾಣಪುರ ಸಂತೆಕಟ್ಟೆ, ಉಡುಪಿ ನಗರ, ಮಣಿಪಾಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ ಬಿಸಿಲು ಮತ್ತು ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಗುಡುಗು-ಮಿಂಚಿನ ಸಹಿತ ಉತ್ತಮ ಮಳೆಯಾಗಿದೆ. ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾಪು ಮತ್ತು ಹೆಬ್ರಿ ತಾಲೂಕುಗಳಾದ್ಯಂತ ಇದೇ ರೀತಿಯ ವಾತಾವರಣವಿತ್ತು.
ಸಂಜೆಯ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚಿನ ಅಬ್ಬರ ಹೆಚ್ಚಾಗಿದ್ದು, ಕೆಲವು ಕಡೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ಗುರುವಾರ ರಾತ್ರಿಯಿಡೀ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಸುರಿದಿತ್ತು. ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಚಂದ್ರಾಯ ಆಚಾರ್ಯ ಅವರ ಮನೆಗೆ ಸಿಡಿಲು ಬಡಿದು ಮನೆಗೆ ಭಾಗಶಃ ಹಾನಿಯಾಗಿದೆ.
ಶುಕ್ರವಾರ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲೂ ಮಳೆಯಾಗಿದೆ. ಕೆರ್ವಾಶೆ, ಬಜಗೋಳಿ, ಹೊಸ್ಮಾರು, ಹಿರಿಯಡ್ಕ, ಬೈಲೂರು ಮತ್ತು ಅಜೆಕಾರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಧ್ಯಾಹ್ನ ಬಳಿಕ ಸಾಧಾರಣ ಮಳೆಯಾಗಿದೆ.
ಶುಕ್ರವಾರ ಮಧ್ಯಾಹ್ನ ಪುಂಜಾಲಕಟ್ಟೆ ಹಾಗೂ ಕಡಬ ತಾಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೃತಕ ನೆರೆ ಸೃಷ್ಟಿಯಾಯಿತು. ಬಿ.ಸಿ. ರೋಡ್-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಹಳ್ಳವು ಹೂಳು ತುಂಬಿ ಮುಚ್ಚಿಕೊಂಡಿದ್ದರಿಂದ ಈ ಪ್ರವಾಹ ಉಂಟಾಗಿ ಮಂಗಳೂರು-ಬೆAಗಳೂರು ಹೆದ್ದಾರಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು.
ಬಿ.ಸಿ. ರೋಡ್-ಅಡ್ಡಹೊಳೆ ಹೆದ್ದಾರಿ ಯೋಜನೆಯಡಿ ನೀರಕಟ್ಟೆ ಬಳಿ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದ್ದು, ಹಳ್ಳದಲ್ಲಿ ಹೂಳು ತುಂಬಿತ್ತು. ಈ ಹಿಂದೆ ಸಾಧಾರಣ ಮಳೆ ಸುರಿದಾಗ ಹಳ್ಳದಲ್ಲಿ ಹೆಚ್ಚು ನೀರು ಹರಿದಿರಲಿಲ್ಲ. ಆದರೆ ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಏಕಾಏಕಿ ನೀರಿನ ಪ್ರವಾಹ ಹೆಚ್ಚಾಗಿ ಹಳ್ಳದಂತೆ ಹರಿಯಿತು.
ನೀರಿನ ರಭಸಕ್ಕೆ ಮರದ ತುಂಡುಗಳು ಮತ್ತು ಹಳ್ಳದ ಹೂಳು ಸೇರಿಕೊಂಡು ಹಳ್ಳವು ಸಂಪೂರ್ಣವಾಗಿ ಮುಚ್ಚಿಹೋಯಿತು. ಪರಿಣಾಮ ನೀರು ಹೆದ್ದಾರಿಯ ಮೇಲೆ ಹರಿದು ಸಂಚಾರಕ್ಕೆ ತಡೆಯುಂಟಾಯಿತು. ನೀರಕಟ್ಟೆ ಮತ್ತು ಬೆದ್ರೋಡಿ ಪ್ರದೇಶದ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಲವೆಡೆ ನೀರು ನಿಂತು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.
ಮಳೆಯ ತೀವ್ರತೆ ತಗ್ಗಿದ ಬಳಿಕ ಮತ್ತು ಹೆದ್ದಾರಿಯಲ್ಲಿದ್ದ ಹೂಳನ್ನು ತೆರವುಗೊಳಿಸಿದ ನಂತರ ಹೆದ್ದಾರಿಯಲ್ಲಿ ನೀರು ಸರಿದು ಸಂಚಾರ ಕ್ರಮೇಣ ಸುಧಾರಿಸಿತು.
ಉಪ್ಪಿನಂಗಡಿ ಸುತ್ತಮುತ್ತಲಿನ ಬಜತ್ತೂರು, ಕಾಂಚನ, ಹಳೆನೆರೆಕೆರೆ, ಕೊಯಿಲ್ಲ, ಗೋಳಿತ್ತೊಟ್ಟು, ವಳಾಲು, ನೀರಕಟ್ಟೆ ಮತ್ತು ಬೆದ್ರೋಡಿ ಪ್ರದೇಶಗಳಲ್ಲೂ ಭಾರಿ ಮಳೆ ಸುರಿದಿದೆ. ಹಲವೆಡೆ ಹಳ್ಳಗಳು ಉಕ್ಕಿ ಹರಿದಿದ್ದು, ಗದ್ದೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು ಒಂದೂವರೆ ಗಂಟೆಗಳ ಕಾಲ ನಿರಂತರವಾಗಿ ಸುರಿದು, ಬಳಿಕ ರಾತ್ರಿಯವರೆಗೆ ಬಿಡುಬಿಟ್ಟು ತುಂತುರು ಮಳೆ ಮುಂದುವರಿಯಿತು.
ಮುಚ್ಚಿದ ಹಳ್ಳದ ಮೂಲಕ ನೀರು ಹರಿಯಲು ಸಾಧ್ಯವಾಗದೆ ನೀರಕಟ್ಟೆ ಪ್ರದೇಶವು ಜಲಾವೃತಗೊಂಡು ಹೆದ್ದಾರಿಯು ವಿಶಾಲವಾದ ನೀರಿನ ಕೊಳದಂತೆ ಗೋಚರಿಸಿತು. ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಏಕಾಏಕಿ ನೀರು ನಿಂತಿರುವುದನ್ನು ಕಂಡು ಆತಂಕಗೊಂಡು ಪ್ರವಾಹದ ನೀರಿನಲ್ಲಿ ವಾಹನ ಚಲಾಯಿಸಲು ಹರಸಾಹಸ ಪಡಬೇಕಾಯಿತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಅನಿರೀಕ್ಷಿತವಾಗಿ ಸುರಿದ ಭಾರಿ ಮಳೆಯಿಂದಾಗಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಅಡಿಕೆ ತೋಟಗಳು ಹಾಗೂ ಭತ್ತದ ಗದ್ದೆಗಳು ಜಲಾವೃತಗೊಂಡವು. ತೋಟಗಳಲ್ಲಿ ಬಿದ್ದಿದ್ದ ಅಡಿಕೆಗಳು ಪ್ರವಾಹದ ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿವೆ. ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಗೂ ಹಾನಿಯಾಗಿರುವುದಾಗಿ ರೈತರು ತಿಳಿಸಿದ್ದಾರೆ.
ಹೆದ್ದಾರಿ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಜಲಾವೃತಗೊಂಡಿರುವ ರಸ್ತೆಯಲ್ಲಿ ಸಾಗಬೇಕೋ ಅಥವಾ ಸ್ಥಳೀಯ ರಸ್ತೆಗಳಲ್ಲಿ ಸಾಗಬೇಕೋ ತಿಳಿಯದೆ ವಾಹನ ಸವಾರರು ಪರದಾಡಿದರು. ಕಾರುಗಳು ಹಾಗೂ ಟ್ಯಾಂಕರ್ಗಳು ಸಹ ಹೆದ್ದಾರಿಯ ನೀರಿನಲ್ಲಿ ಸಿಲುಕಿಕೊಂಡಿದ್ದು, ಚಾಲಕರು ಮುಂದೆ ಸಾಗಲು ಹೆಣಗಾಡಬೇಕಾಯಿತು.
ಈ ಬಾರಿ ಮಳೆಯು ತುಸು ಕಡಿಮೆಯಿದ್ದ ಕಾರಣ ಈ ಪ್ರಮಾಣದ ಪ್ರವಾಹವನ್ನು ಈ ಪ್ರದೇಶವು ಕಂಡಿರಲಿಲ್ಲ, ಹೀಗಾಗಿ ಏಕಾಏಕಿ ಉಂಟಾದ ಕೃತಕ ನೆರೆಯಿಂದ ಸ್ಥಳೀಯ ನಿವಾಸಿಗಳು ಬೆರಗಾದರು.
ನೀರಿನಲ್ಲಿ ಮುಳುಗಿರುವ ಹೆದ್ದಾರಿಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಷ್ಟೊಂದು ಅಪಾರ ಪ್ರಮಾಣದ ನೀರು ಎಲ್ಲಿಂದ ಬಂತು ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.