ಮಂಗಳೂರು, ಅ.30 (DaijiworldNews/AA): ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ದಂಡ ಪಾವತಿಸುವಂತೆ ಸೈಬರ್ ವಂಚಕರು ಸಾರ್ವಜನಿಕರ ಮೊಬೈಲ್ ಫೋನ್ಗಳಿಗೆ SMS/Whatsapp ಮೂಲಕ ನಕಲಿ ಲಿಂಕ್ಗಳು ಹಾಗೂ APK ಫೈಲ್ಗಳನ್ನು ಕಳುಹಿಸಿ, ಸೈಬರ್ ವಂಚನೆ ನಡೆಸುತ್ತಿರುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

ಈ ರೀತಿಯ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2026ನೇ ಸಾಲಿನಲ್ಲಿ ಈವರೆಗೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಈ ವಂಚನೆಯಿಂದ ಸಾರ್ವಜನಿಕರು ಒಟ್ಟು ಸುಮಾರು ರೂ. 44 ಲಕ್ಷ ಹಣವನ್ನು ಕಳೆದುಕೊಂಡಿರುತ್ತಾರೆ.
ಆದ್ದರಿಂದ, ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ತಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಅಧಿಕೃತ ಇ-ಚಲನ್ ವೆಬ್ಸೈಟ್ನಲ್ಲಿ ಅಥವಾ ಖುದ್ದಾಗಿ ಹತ್ತಿರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪರಿಶೀಲಿಸಿದ ನಂತರವೇ ದಂಡದ ಮೊತ್ತವನ್ನು ಪಾವತಿಸಬೇಕು.
ಸೈಬರ್ ವಂಚನೆಯಿಂದ ಸುರಕ್ಷಿತವಾಗಿರಲು ಸಾರ್ವಜನಿಕರು ಈ ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಕೋರಲಾಗಿದೆ.
DO's (ಮಾಡಬೇಕಾದ ಕ್ರಮಗಳು)
1. ತಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಇ-ಚಲನ್ ಬಾಕಿ ಇದೆಯೇ ಎಂಬುದನ್ನು ಸರ್ಕಾರದ ಅಧಿಕೃತ ವೆಬ್ಸೈಟ್ https://echallan.parivahan.nic.in ನಲ್ಲಿ ಮಾತ್ರ ಪರಿಶೀಲಿಸಿ, ಅಲ್ಲಿಯೇ ದಂಡದ ಮೊತ್ತವನ್ನು ಪಾವತಿಸುವುದು.
2. ಇ-ಚಲನ್ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ, ಮಂಗಳೂರು ನಗರದ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ /ಸಂಚಾರ ಪೊಲೀಸ್ ಅಧಿಕಾರಿಗಳನ್ನು ಭೇಟಿ ನೀಡಿ ಖಚಿತಪಡಿಸಿಕೊಳ್ಳುವುದು.
3. ಈ-ಚಾಲನ್ ನೋಟಿಸು ಪೋಸ್ಟ್ ಮೂಲಕ ಸ್ವೀಕೃತವಾಗಿದ್ದರೆ, ಅದರ ದಂಡವನ್ನು Mangaloreone / Karnatakaone ನ ಅಧಿಕೃತ ವೆಬ್ಸೈಟ್ /ಅಪ್ ಮೂಲಕ ಪಾವತಿಸುವುದು.
DON'Ts (ಮಾಡಬಾರದ ಕ್ರಮಗಳು)
1. ಮೊಬೈಲ್ ಫೋನ್ಗೆ ಬರುವ ಯಾವುದೇ APK ಫೈಲ್ಗಳನ್ನು ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಬಾರದು ಅಥವಾ ಇಸ್ಟಾಲ್ ಮಾಡಬಾರದು.
2. ಅಪರಿಚಿತ ವ್ಯಕ್ತಿಗಳಿಂದ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು.
3. ಇ-ಚಲನ್ ದಂಡ ಪಾವತಿಸುವಂತೆ ಬರುವ ಅಪರಿಚಿತ ಲಿಂಕ್ಗಳ ಮೂಲಕ ಬ್ಯಾಂಕ್ ಖಾತೆಯ ವಿವರಗಳು, ATM ಕಾರ್ಡ್ ವಿವರಗಳು, OTP ಅಥವಾ ಇತರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು.
4. ಅಧಿಕೃತ ವೆಬ್ಸೈಟ್ಗಳ ತರಹ ಕಾಣುವ ನಕಲಿ ವೆಬ್ಸೈಟ್ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೇವಲ https:// ಇರುವುದರಿಂದಲೇ ವೆಬ್ಸೈಟ್ ಅಧಿಕೃತವೆಂದು ಪರಿಗಣಿಸಬಾರದು.
ಸಾರ್ವಜನಿಕರು ಮೇಲ್ಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೈಬರ್ ವಂಚನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವುದು. ತಮ್ಮ ಮೊಬೈಲ್ ಫೋನ್ಗೆ ಬರುವ ಇ-ಚಲನ್ ದಂಡ ಪಾವತಿ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ 0824-2220823 ಸಂಖ್ಯೆಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಬಹುದು.