ಮಂಗಳೂರು, ನ 01 (DaijiworldNews/TA): ಕನ್ನಡಾಭಿಮಾನವು ಇತರ ಭಾಷಿಗರನ್ನು ದೂರವಿಡುವ ಶಕ್ತಿಯಾಗದೆ, ಎಲ್ಲರನ್ನೂ ಪ್ರೀತಿ ಮತ್ತು ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು. ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


















ಕನ್ನಡವೆಂದರೆ ಕೇವಲ ಒಂದು ಭಾಷೆಯ ಹೆಸರಲ್ಲ ಅದೊಂದು ಮಂತ್ರ, ಮಹಾಶಕ್ತಿ. ಕನ್ನಡ ನಮ್ಮ ಅಸ್ಮಿತೆ, ಈ ಮಣ್ಣಿನ ಕಂಪು ಮಾತ್ರವಲ್ಲದೆ ಬದುಕಿನ ಪ್ರತಿ ಹೆಜ್ಜೆಯಲ್ಲೂ ಬೆಸೆದುಕೊಂಡಿರುವ ಆತ್ಮೀಯತೆಯ ನಂಟಾಗಿದೆ. ಕಾವೇರಿಯ ನಿರಂತರ ಹರಿವು, ಸಹ್ಯಾದ್ರಿಯ ಎತ್ತರದ ಗರಿಮೆ ಹಾಗೂ ಕರಾವಳಿಯ ಕಡಲಿನ ಅಲೆಗಳ ಸಂವಾದವೇ ಕನ್ನಡ ಎಂದು ಬಣ್ಣಿಸಿದರು. ಕನ್ನಡವು ಕೇವಲ ಗತಕಾಲದ ಇತಿಹಾಸದ ವೈಭವವಲ್ಲ. ಅದು ವರ್ತಮಾನದ ಆತ್ಮವಿಶ್ವಾಸವೂ ಹೌದು, ನಮ್ಮೆಲ್ಲರ ಭವಿಷ್ಯದ ಹೊಣೆಗಾರಿಕೆಯೂ ಹೌದು ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 120 ವ್ಯಕ್ತಿಗಳು ಹಾಗೂ 53 ಸಂಘ ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿತರಿಸಲಾಯಿತು. ಪೊಲೀಸ್, ಎನ್ಸಿಸಿ ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬೃಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.