ಕಾಸರಗೋಡು, ನ 01 (DaijiworldNews/TA): ಕೇರಳದ ಸಮುದ್ರ ಪ್ರದೇಶದಲ್ಲಿ ಅನುಮತಿ ಇಲ್ಲದೆ ಯಾಂತ್ರೀಕೃತ ಮೀನುಗಾರಿಕೆ ನಡೆಸುತ್ತಿದ್ದ ಕರ್ನಾಟಕ ಮೂಲದ ಉಳ್ಳಾಲದ ಟ್ರಾಲರ್ ದೋಣಿಯನ್ನು ಕೇರಳ ಮೀನುಗಾರಿಕೆ ಇಲಾಖೆ ವಶಪಡಿಸಿಕೊಂಡಿದೆ. ‘ಸಮೃದ್ಧಿ’ ಹೆಸರಿನ ದೋಣಿಯ ಮಾಲೀಕರಿಗೆ 2.5 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಒಂದು ವಾರದೊಳಗೆ ಕರ್ನಾಟಕ ಮೂಲದ ನಾಲ್ಕು ದೋಣಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಗುರುವಾರ ರಾತ್ರಿ ಮಂಜೇಶ್ವರ ಕರಾವಳಿಯಿಂದ 12 ನಾಟಿಕಲ್ ಮೈಲುಗಳ ವ್ಯಾಪ್ತಿಯೊಳಗೆ ಮೀನುಗಾರಿಕೆ ನಡೆಸುತ್ತಿದ್ದಾಗ ಮೀನುಗಾರಿಕೆ ಇಲಾಖೆ ಮತ್ತು ಸಾಗರ ಜಾರಿ ವಿಭಾಗದ ಜಂಟಿ ಗಸ್ತು ತಂಡ ದೋಣಿಯನ್ನು ತಡೆಹಿಡಿದಿದೆ. ಕಿಜೂರು ಮೀನುಗಾರಿಕೆ ಕೇಂದ್ರದ ಸಹಾಯಕ ನಿರ್ದೇಶಕ ರಾಜೇಶ್ ಟಿ.ಆರ್. ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಾಗರ ಜಾರಿ ವಿಭಾಗದ ಎಎಸ್ಐ ವಿನೋದ್ ಕುಮಾರ್ ಕೆ.ಕೆ., ಸಿಪಿಒ ಅರ್ಜುನ್, ಬೇಕಲ್ ಕರಾವಳಿ ಪೊಲೀಸ್ ಠಾಣೆಯ ಸಿಬ್ಬಂದಿ ಮನೋಜ್ ಕುಮಾರ್, ಜೈಸನ್ ಸೇರಿದಂತೆ ರಕ್ಷಣಾ ಸಿಬ್ಬಂದಿ ಹಾಗೂ ಗಸ್ತು ದೋಣಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಮೀನುಗಾರಿಕೆ ಉಪನಿರ್ದೇಶಕಿ ಸಿ.ಕೆ. ಶೈನಿ ಅವರು ದೋಣಿ ಮಾಲೀಕರಿಗೆ 2.5 ಲಕ್ಷ ರೂ. ದಂಡ ವಿಧಿಸಿದ್ದಾರೆ. ದೋಣಿಯಲ್ಲಿ ಪತ್ತೆಯಾದ ಮೀನುಗಳನ್ನು 75,000 ರೂ.ಗೆ ಹರಾಜು ಮಾಡಲಾಗಿದೆ. ಮೀನುಗಾರಿಕೆ ನಿಯಮಗಳನ್ನು ಉಲ್ಲಂಘಿಸುವ ದೋಣಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ನಾಲ್ಕು ದಿನಗಳ ಹಿಂದೆ ಮಂಜೇಶ್ವರ ಕರಾವಳಿಯ 12 ನಾಟಿಕಲ್ ಮೈಲುಗಳ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದಾಗ ಅಗತ್ಯ ಪರವಾನಗಿ ಸಲ್ಲಿಸದ ಕರ್ನಾಟಕ ಮೂಲದ ‘ಅಲಿಸಾ’ ಟ್ರಾಲರ್ ದೋಣಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರ ಮಾಲೀಕರಿಗೂ 2.5 ಲಕ್ಷ ರೂ. ದಂಡ ವಿಧಿಸಲಾಗಿದ್ದು, ದೋಣಿಯಲ್ಲಿದ್ದ ಮೀನುಗಳನ್ನು 27,000 ರೂ.ಗೆ ಹರಾಜು ಮಾಡಲಾಗಿತ್ತು.
ಇದಕ್ಕೂ ಮೊದಲು ‘ಏಕಾಂಶ’ ಮತ್ತು ‘ದಿಶಾ’ ಹೆಸರಿನ ಕರ್ನಾಟಕ ಮೂಲದ ಇನ್ನೆರಡು ದೋಣಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಎರಡೂ ದೋಣಿಗಳಿಗೆ ತಲಾ 2.5 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಅವುಗಳಿಂದ ವಶಪಡಿಸಿಕೊಂಡ ಮೀನುಗಳನ್ನು ಹರಾಜು ಮಾಡುವ ಮೂಲಕ ಒಟ್ಟು 1.1 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಕೇರಳದ ನಿಯಮಗಳ ಪ್ರಕಾರ, ಇತರ ರಾಜ್ಯಗಳ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳು ಕೇರಳದ 12 ನಾಟಿಕಲ್ ಮೈಲುಗಳ ಪ್ರಾದೇಶಿಕ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಲು ರಾಜ್ಯ ಮೀನುಗಾರಿಕೆ ಇಲಾಖೆಯಿಂದ ವಿಶೇಷ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.