ಮಂಗಳೂರು, ನ.04 (DaijiworldNews/AK): ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಕಾರ್ಮಿಕರನ್ನು ವಿಭಜಿಸುವ ಅಥವಾ ಒಡೆಯುವ ಕೆಲಸ ಮಾಡುವುದಿಲ್ಲ ಬದಲಾಗಿ ಕಾರ್ಮಿಕರನ್ನು ಒಗ್ಗೂಡಿಸಿ ಸಂಘಟಿಸುವ ಕೆಲಸ ಮಾಡುತ್ತದೆ. ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಹಿತಾಸಕ್ತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಹೊಸ ಕಾರ್ಯಕರ್ತರನ್ನು ಸಂಘಟನೆಗೆ ಜೋಡಿಸುವ ಪ್ರೇರಣೆಯನ್ನು ನೀಡಬೇಕು ಎಂದು ಬಿಎಂಎಸ್ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ತಂಗರಾಜ್ ಜೀ ಹೇಳಿದರು.



ಮಂಗಳೂರಿನ ಬಿಎಂಎಸ್ ಜಿಲ್ಲಾ ಕಚೇರಿಯಲ್ಲಿ ನವೆಂಬರ್ 3ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಹಿತವೇ ಸರ್ವೋಚ್ಚ ಎಂಬ ರಾಷ್ಟ್ರೀಯ ಚಿಂತನೆಯೊಂದಿಗೆ ಕಾರ್ಮಿಕರನ್ನು ಉದ್ಯೋಗದೊಂದಿಗೆ ಜೋಡಿಸುತ್ತಾ, ಅವರ ಅಭ್ಯುದಯ ಮತ್ತು ಶ್ರೇಯೋಭಿವೃದ್ಧಿಗಾಗಿ ಬಿಎಂಎಸ್ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಮಿಕರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ಪಿಎಫ್ (EPF), ಇಎಸ್ಐ (ESI) ಸೇರಿದಂತೆ ವಿವಿಧ ಕಾರ್ಮಿಕ ಕಲ್ಯಾಣ ಸೌಲಭ್ಯಗಳಿಗಾಗಿ ಬಿಎಂಎಸ್ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದೆ. ಕನಿಷ್ಠ ವೇತನ ನಿಗದಿಯ ವಿಚಾರದಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಹೋರಾಟ ನಡೆಸಿ ಕಾರ್ಮಿಕರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ವೇತನ ಹಾಗೂ ಕಾರ್ಮಿಕರ ಇತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೂ ಬಿಎಂಎಸ್ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು.
ಸಂಘಟನೆಯ ಬಲವರ್ಧನೆಗೆ ಹೊಸ ಕಾರ್ಯಕರ್ತರನ್ನು ಗುರುತಿಸಿ ಸಂಘಟನೆಗೆ ಜೋಡಿಸುವುದು, ವಿವಿಧ ಕಾರ್ಮಿಕ ಸಂಘಗಳ ಚಟುವಟಿಕೆಗಳನ್ನು ಬಲಪಡಿಸುವುದು ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಸಂಘಟಿತವಾಗಿ ಸ್ಪಂದಿಸುವುದು ಪ್ರತಿಯೊಬ್ಬ ಸಂಘಟನಾ ಕಾರ್ಯಕರ್ತನ ಜವಾಬ್ದಾರಿಯಾಗಿದೆ ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆಯ ಪ್ರಸ್ತುತ ಸ್ಥಿತಿಗತಿ, ವಿವಿಧ ಕಾರ್ಮಿಕ ಸಂಘಗಳ ಕಾರ್ಯಚಟುವಟಿಕೆಗಳು, ಕಾರ್ಮಿಕರ ಸಮಸ್ಯೆಗಳು ಮತ್ತು ಮುಂದಿನ ಸಂಘಟನಾ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಮುಖಂಡರಾದ ವಿಶ್ವನಾಥ್ ಶೆಟ್ಟಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು., ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಪ್ರಮುಖರಾದ ರೋಹಿತಾಶ್ವ, ಕುಮಾರ್ ನಾಥ್ ಶೆಟ್ಟಿ, ಉದಯ ಕುಮಾರ್, ವಸಂತ ಕುಮಾರ್ ಮನಿಹಳ್ಳ, ಪುರಂದರ ಶೆಟ್ಟಿ, ನಳಿನಿ ಅಡ್ಯಾರ್ ಹಾಗೂ ಗೀತಾ ಧರ್ಮರಾಜ್, ಜಿಲ್ಲಾ ಪದಾಧಿಕಾರಿಗಳು, ಹಾಗೂ ವಿವಿಧ ಬಿಎಮ್ಎಸ್ ಸಂಯೋಜಿತ ಯೂನಿಯನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.