ಮಂಗಳೂರು, ನ.04 (DaijiworldNews/AA): ಸುದೀರ್ಘ ಅವಧಿಯ ಸಮೂಹ ಗಾಯನ ಮಾರಾಥಾನ್ ಗಿನ್ನೆಸ್ ವಿಶ್ವ ದಾಖಲೆಯ ಐತಿಹಾಸಿಕ ಯತ್ನವು ತನ್ನ ಮೊದಲ 30 ಗಂಟೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಒಟ್ಟು 12 ದಿನ, 12 ಗಂಟೆ ಮತ್ತು 12 ಸೆಕೆಂಡುಗಳ ಕಾಲ ಸತತವಾಗಿ ಹಾಡುವ ಮೂಲಕ ನವೆಂಬರ್ 15ರ ವೇಳೆಗೆ ಹೊಸ ವಿಶ್ವ ದಾಖಲೆ ನಿರ್ಮಿಸುವ ಗುರಿಯೊಂದಿಗೆ ಈ ಸಂಗೀತ ಪಯಣ ಮುಂದುವರಿದಿದೆ.



















ಫ್ರಾಂಕ್ ವಾಲ್ಟರ್ ಆಲ್ಬುಕರ್ಕ್ ಎಸ್ಜೆ ಸ್ಮಾರಕ ಗಾಯನ ವೃಂದದ ಪ್ರದರ್ಶನದ ನಂತರ, ಮಂಗಳೂರಿನ ಬಿಜೈ ಭಾಗದ 'ಇಜೊಯ್ಚೆ ಕೊಲ್ಲೆ' ತಂಡದ ಸ್ಪೂರ್ತಿದಾಯಕ ಗಾಯನದೊಂದಿಗೆ ಮಂಗಳವಾರ ಬೆಳಗ್ಗೆ 6:00 ಗಂಟೆಗೆ ಈ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಭಾಗವಹಿಸುತ್ತಿರುವ ಪ್ರತಿಯೊಂದು ತಂಡವು ಕೊಂಕಣಿಯ ಪ್ರಸಿದ್ಧ ಹಾಡುಗಳನ್ನೊಳಗೊಂಡ ಒಂದು ಗಂಟೆಯ ಅದ್ಭುತ ಗಾಯನ ಸೌರಭವನ್ನು ಪ್ರಸ್ತುತಪಡಿಸುತ್ತಿದ್ದು, ನಗರದ ಪುರಭವನದಲ್ಲಿ ನೆರೆದಿರುವ ಸಾವಿರಾರು ಸಂಗೀತ ಪ್ರೇಮಿಗಳು ಗಾಯಕರನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಆರಂಭಿಕ 30 ಗಂಟೆಗಳಲ್ಲಿ ವಿವಿಧ ತಂಡದ ಪ್ರತಿಭೆಗಳು ವೇದಿಕೆಯಲ್ಲಿ ತಮ್ಮ ಗಾಯನ ಸಿರಿ ಅನಾವರಣಗೊಳಿಸಿವೆ. ಸ್ಥಳೀಯ ತಂಡಗಳಾದ ರಾಬಿನ್ ಸಿಕ್ವೇರಾ ಆಂಡ್ ಗ್ರೂಪ್, ಮ್ಯೂಸಿಕ್ ಹೌಸ್, ಮುಡಿಪು ಮಿರಾಕಲ್ ಮೋಡೀಸ್, ದೇರೆಬೈಲ್ ಹಾರ್ಮೋನಿಕ್ ಬೀಟ್ಸ್, ಮುಲ್ಕಿಚಿಂ ಮೋತಿಯಾಂ, ಶೈನಿಂಗ್ ಸ್ಟಾರ್ಸ್ ಉಪ್ಪಿನಂಗಡಿ ಮತ್ತು ಶಿರ್ತಾಡಿ-ಚಿಂ ಟ್ಯಾಲೆಂಟಮ್ ತಂಡಗಳು ಹಾಗೂ ಸಂತ ಅಲೋಶಿಯಸ್ ಬೋಧಕ ಸಿಬ್ಬಂದಿ ತಂಡಗಳು ಗಾಯನ ಪ್ರಸ್ತುತಪಡಿಸಿವೆ.
ಕರ್ನಾಟಕ ಮತ್ತು ಗೋವಾದ ಸಾಂಸ್ಕೃತಿಕ ತಂಡಗಳ ಪ್ರಾತಿನಿಧ್ಯ ಇಲ್ಲಿ ಎದ್ದು ಕಾಣುತ್ತಿದೆ. ಮಂಗಳೂರು ಹಾಗೂ ಸುತ್ತಮುತ್ತಲಿನ ಭಾಗಗಳಾದ ವೇಲೆನ್ಸಿಯಾ (ಚಿಂ ತಾರಾಂ), ಪಕ್ಷಿಕೇರೆ (ಚಿಂ ಯಾತ್ರಿಕಾಂ), ನಿರ್ಮಾರ್ಚೆ ಸರ್ಗಮ್, ನೆಲ್ಲಿಕಾರು ಮಿಯಾರ್ಚಿ ನೆಕೇತ್ರಾಂ, ಉಡುಪಿ ಪ್ಯಾರಿಷ್, ರಂಗ್ ತರಂಗ್ (ಮೂಡುಬಿದಿರೆ ತಂಡ 1 ಮತ್ತು 2), ನವಾಯತಿ ತಂಡ (ಭಟ್ಕಳ), ಬಾಲಿಕಾ ಮರಿಯಾ ಗಾಯನ ವೃಂದ (ಭಟ್ಕಳ), ಆಮ್ಚೊಮುಲ್ ಸಿದ್ದಿ ಸಾಂಸ್ಕೃತಿಕ ಕಲಾ ತಂಡ (ಹಳಿಯಾಳ) ಮತ್ತು ರೈಸಿಂಗ್ ರೇಸ್ (ಮುಂಡಗೋಡು) ತಂಡಗಳು ಭಾಗವಹಿಸಿವೆ.
ಅಲ್ಲದೆ, ಗೋವಾದಿಂದ ಆಗಮಿಸಿದ ಹೆಸರಾಂತ ಗಾಯಕ ಲಾರಿ ಟ್ರಾವಾಸೊ, ಮಾಂಡೊ ಮೊಗಿ (ಮಡಗಾಂವ್), ಮಾಚಿ ಮೊಗಿ (ಸಾಂಟಾ ಕ್ರೂಜ್), ಕೆಎಟಿಎಸ್, ಕ್ರೊಯಿಟ್ಜರ್ ಸ್ವಿಲಾನ್ ಮ್ಯೂಸಿಕ್ ಎಸೆಂಬಲ್, ತಲ್ಲಾಗಾಂವ್ಚಿಂ ನೊಕೇತ್ರಾನ್, ವೇಲಿಮ್ ಕ್ಷೇತ್ರ ಸ್ಪೋರ್ಟ್ಸ್ ಕಲ್ಚರಲ್ ಆಂಡ್ ಇಕೋ ಕ್ಲಬ್ ಮತ್ತು ಲೆನಾಯ್ ಗೊಮಿಂಡಿಸ್ ಮ್ಯೂಸಿಕಲ್ ಟ್ರೂಪ್ ತಂಡಗಳು ಗಮನ ಸೆಳೆದಿವೆ. ಗ್ಲೋಬಲ್ ಸಮುದಾಯವನ್ನು ಪ್ರತಿನಿಧಿಸಿ 'ಆಸ್ಟ್ರೇಲಿಯಾ-ಚೆ ಅಮಿಗ್' ತಂಡವು ಗಾಯನ ಪ್ರಸ್ತುತಪಡಿಸಿರುವುದು ಈ ಮಾರಾಥಾನ್ಗೆ ಅಂತಾರಾಷ್ಟ್ರೀಯ ಮೆರುಗು ನೀಡಿದೆ.
ಮಂಗಳೂರಿನ ಪುರಭವನದಲ್ಲಿ ಈ ನಿರಂತರ ಗಾಯನ ಮಾರಾಥಾನ್ ಮುಂದುವರಿದಿದ್ದು, ಭಾಗವಹಿಸುವ ತಂಡಗಳು 12 ದಿನಗಳ ಮೈಲಿಗಲ್ಲನ್ನು ತಲುಪಲು ಉತ್ಸಾಹದಿಂದ ಸಾಗುತ್ತಿವೆ.