ಬಂಟ್ವಾಳ, ನ.05 (DaijiworldNews/TA): ಅನಾರೋಗ್ಯ ಪೀಡಿತರನ್ನು ತುರ್ತು ಸಂದರ್ಭದಲ್ಲಿ ತಮ್ಮ ರಿಕ್ಷಾದಲ್ಲೇ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಲು ನೆರವಾಗುತ್ತಿದ್ದ ಬಂಟ್ವಾಳದ ಬಡಕಬೈಲಿನ ರಿಕ್ಷಾ ಚಾಲಕರು ಇದೀಗ ಊರಿನ ಜನರಿಗಾಗಿ ಆ್ಯಂಬುಲೆನ್ಸ್ ಖರೀದಿಸಿ ಮಾನವೀಯ ಸೇವೆಗೆ ಹೊಸ ರೂಪ ನೀಡಿದ್ದಾರೆ.




ಪೊಳಲಿ ಸಮೀಪದ ಕರಿಯಂಗಳ ಗ್ರಾಮದ ಬಡಕಬೈಲು ನವೋದಯ ಆಟೋರಿಕ್ಷಾ ಚಾಲಕ-ಮಾಲಕರ ಸಂಘದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 2007ರಲ್ಲಿ ಆರಂಭಗೊಂಡು 2012ರಲ್ಲಿ ನೋಂದಣಿಯಾದ ಸಂಘದಲ್ಲಿ 26 ರಿಕ್ಷಾಗಳಿದ್ದು, ಚಾಲಕರು ತಮ್ಮ ದುಡಿಮೆಯ ಹಣದಲ್ಲಿ ಉಳಿಸಿದ ಮೊತ್ತ ಹಾಗೂ ಸಾರ್ವಜನಿಕರು, ದಾನಿಗಳ ಸಹಕಾರದಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ವಾಹನ ಖರೀದಿಸಿದ್ದಾರೆ. 2 ಲಕ್ಷ ರೂ. ವೆಚ್ಚದಲ್ಲಿ ಅಗತ್ಯ ವೈದ್ಯಕೀಯ ಪರಿಕರಗಳನ್ನು ಅಳವಡಿಸಲಾಗಿದೆ.
ಆ.15ರಂದು ಆರಂಭವಾದ ಪ್ರಯತ್ನ ನ.1ರಂದು ಆ್ಯಂಬುಲೆನ್ಸ್ ಲೋಕಾರ್ಪಣೆಯೊಂದಿಗೆ ಸಾಕಾರಗೊಂಡಿದೆ. ಕರಿಯಂಗಳ ಹಾಗೂ ಅಮ್ಮುಂಜೆ ಗ್ರಾಮದ ಜನರಿಗೆ ತುರ್ತು ಸಂದರ್ಭದಲ್ಲಿ ಈ ಸೇವೆ ಲಭ್ಯವಾಗಲಿದೆ. ಸಂಘದ ಚಾಲಕರೇ ಆ್ಯಂಬುಲೆನ್ಸ್ ಚಾಲಕರಾಗಿಯೂ ಸೇವೆ ನೀಡಲಿದ್ದಾರೆ. ಸಂಘವು ಆ್ಯಂಬುಲೆನ್ಸ್ ಸೇವೆಯಷ್ಟೇ ಅಲ್ಲದೆ ಪ್ರತೀ ತಿಂಗಳು ರಿಕ್ಷಾ ಚಾಲಕರಿಂದ ತಲಾ 100 ರೂ. ಸಂಗ್ರಹಿಸಿ ಅಶಕ್ತರಿಗೆ ನೆರವು ನೀಡುತ್ತಿದೆ. ಈವರೆಗೆ 4 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ಶಿಕ್ಷಣ ಸಹಾಯ, ಅನಾರೋಗ್ಯ ಪೀಡಿತರ ನೆರವು ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿದೆ.
ಎಲ್ಲರೂ ಸೌಹಾರ್ದತೆಯಿಂದ ಬದುಕಬೇಕು, ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬಡಕಬೈಲು ರಿಕ್ಷಾ ಪಾರ್ಕ್ ಇಂದು ಸಮಾಜಮುಖಿ ಸೇವೆಯ ಮೂಲಕ ಗುರುತಿಸಿಕೊಂಡಿದೆ. ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಸಿಗದೆ ಅನೇಕ ಬಾರಿ ರಿಕ್ಷಾದಲ್ಲೇ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ದಾನಿಗಳ ಸಹಕಾರದೊಂದಿಗೆ ಆ್ಯಂಬುಲೆನ್ಸ್ ಖರೀದಿಸಿ ಸಾರ್ವಜನಿಕರ ಸೇವೆಗೆ ನೀಡಿದ್ದೇವೆ ಎಂದು ಸಂಘದ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಸುವರ್ಣ ತಿಳಿಸಿದ್ದಾರೆ.