ಮಂಗಳೂರು, ನ.05 (DaijiworldNews/TA): ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ವಾಹನಗಳಿಗೆ ಆಗುತ್ತಿರುವ ತಾರತಮ್ಯ ಹಾಗೂ ಅವೈಜ್ಞಾನಿಕ ದರ ವಸೂಲಿಯನ್ನು ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಟ್ಯಾಕ್ಸಿ ಚಾಲಕರು ನವೆಂಬರ್ 11 ರಿಂದ ಕೆಂಜಾರಿನ ವಿಮಾನ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.

ಟ್ಯಾಕ್ಸಿ ಚಾಲಕರ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನೀಡಿದ್ದ ಗಡುವು ಮುಗಿದರೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ಉಭಯ ಜಿಲ್ಲೆಗಳ ಟ್ಯಾಕ್ಸಿ ಸಂಘಟನೆಗಳ ನಿಯೋಗವು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರನ್ನು (ACP) ಭೇಟಿ ಮಾಡಿ ಕಾನೂನಾತ್ಮಕ ಅನುಮತಿ ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಸಂಘದ ಅಧ್ಯಕ್ಷ ರಘುಪತಿ ಭಟ್, ದ.ಕ. ಜಿಲ್ಲಾ ಅಧ್ಯಕ್ಷ ಆನಂದ ಕೆ., ಪ್ರಧಾನ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಪದಾಧಿಕಾರಿಗಳಾದ ಹರೀಶ್ ಶೆಟ್ಟಿ, ರೋಶನ್ ಕಿನ್ನಿಗೋಳಿ, ಸಂತೋಷ್ ಕೊಲ್ಯ ಹಾಗೂ ಪ್ರಕಾಶ್ ಸರಳಾಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.