ಮಂಗಳೂರು, ನ.08 (DaijiworldNews/AA): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರು ಮತ್ತು ಉಡುಪಿಯ ವಿವಿಧ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಮಣ್ಣಿನ ಹಣತೆ, ಗೂಡುದೀಪ ಹಾಗೂ ಬಣ್ಣ ಬಣ್ಣದ ಅಲಂಕಾರಿಕ ದೀಪಗಳನ್ನು ಖರೀದಿಸಲು ಸಾರ್ವಜನಿಕರು ಮುಗಿಬಿದ್ದಿದ್ದು, ಮಾರುಕಟ್ಟೆಗಳು ಗ್ರಾಹಕರಿಂದ ಭರ್ತಿಯಾಗಿದ್ದವು.

ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುವ ವಿವಿಧ ಶೈಲಿಯ ಕಲಾತ್ಮಕ ಹಣತೆಗಳನ್ನು ಕಾಣಬಹುದಾಗಿದೆ. ಬಣ್ಣ ಬಳಿದ ಹಾಗೂ ವಿಶಿಷ್ಟ ಆಕಾರದ ಹಣತೆಗಳ ಜೊತೆಗೆ, ನೀರು ಹಾಕಿದ ತಕ್ಷಣ ಬೆಳಗುವ ವಾಟರ್-ಸೆನ್ಸಾರ್ ಹಣತೆ, ಸುಗಂಧಿತ ಮೇಣದಬತ್ತಿಗಳು, ಎಲ್ಇಡಿ ಲೈಟ್ಗಳು ಮತ್ತು ಸ್ಮಾರ್ಟ್ ಕಂಟ್ರೋಲ್ಡ್ ವಿದ್ಯುತ್ ದೀಪಗಳ ಮಾರಾಟ ಜೋರಾಗಿ ನಡೆಯುತ್ತಿದೆ.
ಮನೆ ಅಲಂಕಾರಕ್ಕಾಗಿ ಸಾಂಪ್ರದಾಯಿಕ ಕಾಗದದ ಗೂಡುದೀಪಗಳ ಜೊತೆಗೆ ಹೆಚ್ಚು ಬಾಳಿಕೆ ಬರುವ ಸುಂದರ ಬಟ್ಟೆಯ ಗೂಡುದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶೇಷವಾಗಿ ಕಳಶ, ರಥ ಹಾಗೂ ತುಳಸಿ ಕಟ್ಟೆಯ ಆಕಾರದಲ್ಲಿ ವಿನ್ಯಾಸಗೊಳಿಸಲಾದ ಗೂಡುದೀಪಗಳು ಈ ಬಾರಿಯ ಮುಖ್ಯ ಆಕರ್ಷಣೆಯಾಗಿವೆ. ಜೊತೆಗೆ ಜನರು ಅಲಂಕಾರಿಕ ಸಾಮಗ್ರಿಗಳನ್ನು ಕೂಡ ಹೆಚ್ಚಾಗಿ ಖರೀದಿಸುತ್ತಿದ್ದು, ಸ್ಥಳೀಯ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.
ಬಟ್ಟೆ, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳಿಗೆ ಹೆಚ್ಚಿದ ಬೇಡಿಕೆ
ಪ್ರಮುಖ ಬಟ್ಟೆ ಅಂಗಡಿಗಳು, ಎಲೆಕ್ಟ್ರಾನಿಕ್ಸ್, ಮೊಬೈಲ್ ಹಾಗೂ ಆಟೋಮೊಬೈಲ್ ಶೋರೂಮ್ಗಳು ನೀಡುತ್ತಿರುವ ಹಬ್ಬದ ರಿಯಾಯಿತಿ ಮತ್ತು ವಿಶೇಷ ಕೊಡುಗೆಗಳು ಶಾಪಿಂಗ್ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿವೆ. ಭಾರಿ ದರ ಕಡಿತ, ಕ್ಯಾಶ್ಬ್ಯಾಕ್, ಶೂನ್ಯ ಬಡ್ಡಿದರದ ಇಎಂಐ ಮತ್ತು ಉಚಿತ ಉಡುಗೊರೆಗಳ ಆಕರ್ಷಣೆಗೆ ಒಳಗಾದ ಗ್ರಾಹಕರು ಹೊಸ ಗೃಹಬಳಕೆ ಉಪಕರಣಗಳು, ವಾಹನಗಳು ಹಾಗೂ ಉಡುಪುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ.
ಸಿಹಿತಿಂಡಿಗಳಿಗೆ ಭಾರಿ ಬೇಡಿಕೆ
ದೀಪಾವಳಿ ಹಬ್ಬದಲ್ಲಿ ಸಿಹಿ ಹಂಚುವುದು ಪ್ರಮುಖ ಸಂಪ್ರದಾಯವಾಗಿರುವುದರಿಂದ ಸಿಹಿತಿಂಡಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಸಾಂಪ್ರದಾಯಿಕ ತಿಂಡಿಗಳಾದ ಹೋಳಿಗೆ, ಲಡ್ಡು, ವಿವಿಧ ಬಗೆಯ ಬರ್ಫಿ, ಮೈಸೂರು ಪಾಕ್ ಮತ್ತು ಹಲ್ವಾಗಳಿಗೆ ಅಭೂತಪೂರ್ವ ಬೇಡಿಕೆ ಬಂದಿದೆ ಎಂದು ಸಿಹಿ ತಿನಿಸು ವ್ಯಾಪಾರಿಗಳು ತಿಳಿಸಿದ್ದಾರೆ.