ಮಂಗಳೂರು, ನ.09 (DaijiworldNews/TA): ಸಕ್ಕರೆ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳೂರಿನ ಪಡೀಲ್ ಬಳಿ ರವಿವಾರ ರಾತ್ರಿ ನಡೆದಿದೆ. ಈ ಅಪಘಾತದಲ್ಲಿ ಲಾರಿ ಚಾಲಕ ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಸಾಗುತ್ತಿದ್ದ ಈ ಲಾರಿಯು ಪಡೀಲ್ ಜಂಕ್ಷನ್ ಕಡೆಯಿಂದ ಇಳಿಜಾರು ರಸ್ತೆಯಲ್ಲಿ ಇಳಿಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮಗುಚಿ ಬಿದ್ದಿದೆ. ಪರಿಣಾಮ ಲಾರಿಯಲ್ಲಿದ್ದ ಸಕ್ಕರೆ ಮೂಟೆಗಳು ರಸ್ತೆಯುದ್ದಕ್ಕೂ ಚೆಲ್ಲಿಬಿದ್ದಿವೆ. ಘಟನೆ ಸಂಭವಿಸಿದ ಸ್ಥಳದ ತೀರಾ ಹತ್ತಿರದಲ್ಲೇ ವಿದ್ಯುತ್ ಪರಿವರ್ತಕ ಒಂದಿದ್ದು, ಲಾರಿ ಮತ್ತಷ್ಟು ಎಡಕ್ಕೆ ಚಲಿಸಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.
ವಿಷಯ ತಿಳಿಯುತ್ತಿದ್ದಂತೆ ಕಂಕನಾಡಿ ನಗರ ಠಾಣೆ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಪಡೀಲ್ ಜಂಕ್ಷನ್ ವ್ಯಾಪ್ತಿಯ ಹೆದ್ದಾರಿಯಲ್ಲಿ ಕೆಲಕಾಲ ಸಣ್ಣ ಪ್ರಮಾಣದ ವಾಹನ ದಟ್ಟನೆ ಉಂಟಾಗಿತ್ತು.