ಮಂಗಳೂರು, ನ.10 (DaijiworldNews/TA): ಉಳ್ಳಾಲ ಸಮೀಪದ ಹರೇಕಳ ಮುಖ್ಯರಸ್ತೆಯಲ್ಲಿ ಇಕೋ ಕಾರೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ವಾಹನದಲ್ಲಿ ಯಾರಾದರೂ ಇದ್ದರೇ? ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ. ಹರೇಕಳ ಕಡವಿನಿಂದ ಗ್ರಾಮಚಾವಡಿ ಕಡೆಗೆ ಸಾಗುವ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಕಾರು ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ರಾತ್ರಿಯಿಡೀ ಈ ರಸ್ತೆಯಲ್ಲಿ ಹಲವು ವಾಹನಗಳು ಸಂಚರಿಸಿದ್ದರೂ, ಸುಟ್ಟು ಕರಕಲಾದ ಕಾರು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.

ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ಕಾರು ಎಲ್ಲಿಂದ ಬಂತು, ಯಾವ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿತು ಮತ್ತು ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿತೇ ಎಂಬ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಮೂಡಿದೆ. ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಕಾರಿನೊಳಗೆ ಯಾರಾದರೂ ಇದ್ದರೇ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ವಾಹನದ ಮಾಲೀಕರು ಯಾರು? ಚಾಲಕ ಎಲ್ಲಿದ್ದಾರೆ? ಕಾರು ಸಂಪೂರ್ಣವಾಗಿ ಸುಟ್ಟುಹೋಗುವವರೆಗೂ ಘಟನೆ ಯಾರ ಗಮನಕ್ಕೂ ಬರದಿರಲು ಕಾರಣವೇನು? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ವಿಮಾ ಹಣಕ್ಕಾಗಿ ಬೆಂಕಿ ಹಚ್ಚಲಾಗಿತ್ತೇ? ಹಳೆಯ ಕಾರಿಗೆ ವಿಮಾ ಹಣ ಪಡೆಯುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆಯೇ ಅಥವಾ ವಾಹನವನ್ನು ಯಾವುದಾದರೂ ಕಾನೂನುಬಾಹಿರ ಚಟುವಟಿಕೆಗೆ ಬಳಸಲಾಗಿತ್ತೇ ಎಂಬ ಬಗ್ಗೆಯೂ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಲಭ್ಯವಾಗಿಲ್ಲ. ಘಟನೆಯ ನಿಗೂಢತೆಯನ್ನು ನಿವಾರಿಸಲು ಪೊಲೀಸರು ಸಮಗ್ರ ತನಿಖೆ ನಡೆಸಿ, ಕಾರಿನ ಮಾಲೀಕರು ಹಾಗೂ ಬೆಂಕಿ ಅವಘಡದ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಹರೇಕಳ ಮುಖ್ಯರಸ್ತೆಯಲ್ಲಿ ಪತ್ತೆಯಾದ ಈ ಸುಟ್ಟು ಕರಕಲಾದ ಕಾರಿನ ಹಿಂದಿನ ಸತ್ಯಾಂಶ ತನಿಖೆಯಿಂದಷ್ಟೇ ಹೊರಬರಬೇಕಿದೆ.