ಕಾಸರಗೋಡು, ನ.11 (DaijiworldNews/TA): ಕಡಲತೀರ, ಹಿನ್ನೀರು, ಗಿರಿಧಾಮ, ಸಾಹಸ ಪ್ರವಾಸೋದ್ಯಮ ಹಾಗೂ ಕೃಷಿ ಪ್ರವಾಸೋದ್ಯಮ ಸೇರಿದಂತೆ ಕಾಸರಗೋಡು ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಯ ಸಾಧ್ಯತೆಗಳನ್ನು ಚರ್ಚಿಸಲು ಅಗತ್ಯ ವೇದಿಕೆ ಕಲ್ಪಿಸಲಾಗುವುದು ಎಂದು ಪ್ರವಾಸೋದ್ಯಮ, ಚಲನಚಿತ್ರ ಮತ್ತು ಸಾಂಸ್ಕೃತಿಕ ಸಚಿವ ಪಿ.ಸಿ. ವಿಷ್ಣುನಾಥ್ ಹೇಳಿದರು.

ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಮಂಡಳಿಯ (ಡಿಟಿಪಿಸಿ) ವತಿಯಿಂದ ರಾಣಿಪುರಂ ಪ್ರವಾಸಿ ಸಮುಚ್ಚಯದಲ್ಲಿ ನಿರ್ಮಿಸಲಾದ ಅತಿಥಿಗೃಹ ಹಾಗೂ ಪೂರ್ಣಗೊಂಡ ಸೌಂದರ್ಯವರ್ಧನೆ ಮತ್ತು ನವೀಕರಣ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಣಿಪುರಂನ ಮಕ್ಕಳ ಉದ್ಯಾನವನವನ್ನು ನವೀಕರಿಸಲು ಕ್ರಮ ಕೈಗೊಳ್ಳಲಾಗುವುದು.
ಕೇರಳ ಪ್ರವಾಸೋದ್ಯಮ ಇಲಾಖೆಯ ಮಾರುಕಟ್ಟೆ ಜಾಲದಲ್ಲಿ ಕಾಸರಗೋಡು ಜಿಲ್ಲೆಯ ಪ್ರವಾಸಿ ತಾಣಗಳಿಗೂ ಸೂಕ್ತ ಸ್ಥಾನ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.. ಕಾಞಂಗಾಡ್ ಶಾಸಕ ಗೋವಿಂದನ್ ಪಳ್ಳಿಕ್ಕಾಪಿಲ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಬಿಂದು ಸಿ.ವಿ., ಪನತ್ತಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ರಘುನಾಥನ್, ವಾರ್ಡ್ ಸದಸ್ಯೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಜೆ. ಜೇಯಿಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.