ಮಂಗಳೂರು, ನ.11 (DaijiworldNews/AK):ಮಾಂಡ್ ಸೊಭಾಣ್ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದ ಪ್ರಮುಖ ಆಕರ್ಷಣೆಯಾದ 300 ಗಂಟೆಗಳ (12 ದಿನ, 12 ಗಂಟೆ ಮತ್ತು 12 ನಿಮಿಷ) ಕೊಂಕಣಿ ಗಾಯನ ಮ್ಯಾರಥಾನ್ ಗಿನ್ನಿಸ್ ದಾಖಲೆಯ ಪ್ರಯತ್ನಕ್ಕೆ ಶಾಸಕ ವೇದವ್ಯಾಸ ಕಾಮತ್ ರವರು ಶುಭ ಹಾರೈಸಿದರು.

ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಶಾಸಕರು, 300 ತಂಡಗಳು, 6,700ಕ್ಕೂ ಹೆಚ್ಚು ಗಾಯಕರು, 4,500ಕ್ಕೂ ಹೆಚ್ಚು ಹಾಡುಗಳ ಮೂಲಕ ವಿಶ್ವದಾದ್ಯಂತ ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಸಂಗೀತ ಪರಂಪರೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಈ ಮಹಾ ಸಮ್ಮೇಳನದಲ್ಲಿ ಶಾಶ್ವತ ಕೊಂಕಣಿ- ಜಗತ್ತಿನ ಅಂತ್ಯದವರೆಗೆ ಎಂಬ ಶೀರ್ಷಿಕೆ ಅತ್ಯಂತ ಆಕರ್ಷಣೆಯಾಗಿದೆ. ಈ ಕೊಂಕಣಿ ಸಂಗೀತ ಉತ್ಸವದಲ್ಲಿ ಭಾಗಿಯಾಗಿರುವ ವಿವಿಧ ದೇಶಗಳ ತಂಡಗಳು ಎಲ್ಲೆಡೆಯಿಂದ ಸಂಗೀತ ಪ್ರಿಯರನ್ನು ಮನಸೂರೆಗೊಳಿಸುತ್ತಿದೆ ಎಂದರು.
ಸ್ಥಳೀಯರೂ ಸಹ ಅತ್ಯಂತ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯಾವುದೇ ಬ್ರೇಕ್ ಇಲ್ಲದೇ, ಹಗಲು ರಾತ್ರಿ ನಿರಂತರವಾಗಿ 300 ಗಂಟೆಗಳ ಹಾಡುಗಾರಿಕೆ ಎಂದರೆ ಸುಲಭವಲ್ಲ. ಹಾಗಿದ್ದೂ ಇಂತಹ ಸಾಹಸಕ್ಕೆ ಕೈ ಹಾಕಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಹಾದಿ ಕ್ರಮಿಸಿರುವ ಮಾಂಡ್ ಸೊಭಾಣ್ ಸಂಸ್ಥೆಯ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಾ ಈ ವಿಶೇಷ ಪ್ರಯತ್ನವು ಗಿನ್ನೆಸ್ ದಾಖಲೆಯಾಗಲಿ ಎಂದು ಶುಭ ಹಾರೈಸಿದರು.