ಬಂಟ್ವಾಳ, ನ.13 (DaijiworldNews/TA): ಸಮೀಪದ ಸೂರಿಕುಮೇರು ಕಾಯರಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯೊಬ್ಬರ ಸರವನ್ನು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ಕಸಿದು ಪರಾರಿಯಾದ ಘಟನೆ ನಡೆದಿದೆ. ಇನ್ನು ಮಹಿಳೆಯ ಕುತ್ತಿಗೆಯಿಂದ ಕಸಿದುಕೊಂಡ ಸರವು ಚಿನ್ನದ್ದಲ್ಲ ಎನ್ನಲಾಗಿದ್ದು, ಚಿನ್ನವೆಂದು ಭಾವಿಸಿ ಸರ ಕಸಿದ ದುಷ್ಕರ್ಮಿಗಳೇ ಮೋಸ ಹೋದಂತಾಗಿದೆ.

ಆದರೂ ಇಂತಹ ಕೃತ್ಯಗಳು ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿವೆ. ಬರಿಮಾರು ರಸ್ತೆಯ ಕಡೆಯಿಂದ ಬೈಕ್ನಲ್ಲಿ ಬಂದಿದ್ದ ಇಬ್ಬರು ಯುವಕರು, ಮುಖಕ್ಕೆ ಮಾಸ್ಕ್ ಧರಿಸಿದ್ದರು. ದಾರಿ ಕೇಳುವ ನೆಪದಲ್ಲಿ ಮಹಿಳೆಯ ಬಳಿ ಬಂದ ದುಷ್ಕರ್ಮಿಗಳು, ಕ್ಷಣಾರ್ಧದಲ್ಲಿ ಆಕೆಯ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದು ಅದೇ ರಸ್ತೆಯ ಮೂಲಕ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ದುಷ್ಕರ್ಮಿಗಳು ಪರಾರಿಯಾದ ಬರಿಮಾರು ರಸ್ತೆಯು ಬಿ.ಸಿ.ರೋಡ್, ಮಂಗಳೂರು ಹಾಗೂ ಉಪ್ಪಿನಂಗಡಿ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಆರೋಪಿಗಳು ಯಾವ ದಿಕ್ಕಿನಲ್ಲಿ ತೆರಳಿದ್ದಾರೆ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಸಮೀಪದಲ್ಲಿರುವ ನೂತನ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯದ ದೃಶ್ಯಗಳು ಸೆರೆಯಾಗಿವೆ. ಹಾಡಹಗಲೇ ನಡೆದ ಈ ಕೃತ್ಯದಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಸಾರ್ವಜನಿಕರು ಚಿನ್ನಾಭರಣ ಧರಿಸಿ ಏಕಾಂಗಿಯಾಗಿ ಸಂಚರಿಸುವುದಕ್ಕೂ ಭಯಪಡುವಂತಾಗಿದೆ.