ಉಡುಪಿ, ನ.13 (DaijiworldNews/AA): ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮಂಗಳೂರು ಆಕಾಶವಾಣಿ ಕಾರ್ಯಕ್ರಮಗಳ ಪ್ರಸಾರ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಉಡುಪಿಯ ಅಜ್ಜರಕಾಡಿನಲ್ಲಿ ನೂತನವಾಗಿ ನಿರ್ಮಿಸಲಾದ ಎಫ್ಎಂ ಪ್ರಸಾರ ಕೇಂದ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಉದ್ಘಾಟಿಸಿದರು.



ನಾಮಫಲಕ ಅನಾವರಣಗೊಳಿಸಿ, ರಿಬ್ಬನ್ ಕತ್ತರಿಸುವ ಮೂಲಕ ಕೇಂದ್ರವನ್ನು ಔಪಚಾರಿಕವಾಗಿ ಉದ್ಘಾಟಿಸಿದ ಬಳಿಕ ಮಾತನಾಡಿದ ಸಚಿವರು, "ಕೊಂಕಣ ರೈಲ್ವೆ ಮಾರ್ಗದ ಎಲ್ಲಾ ಹಳಿಗಳನ್ನು ದ್ವಿಗುಣಗೊಳಿಸುವುದು ತಮ್ಮ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ಈ ಗುರಿಯನ್ನು ಸಾಧಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಅವರು ಕೊಂಕಣ ಪ್ರದೇಶ ಮತ್ತು ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈ ಭಾಗದಲ್ಲಿ ಹಲವಾರು ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇತ್ತೀಚೆಗಷ್ಟೇ 10 ರೈಲ್ವೆ ಮೇಲ್ಸೇತುವೆಗಳು ಮತ್ತು ಎರಡು ಸುರಂಗಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ" ಎಂದು ಅವರು ತಿಳಿಸಿದರು.
ಇಂದ್ರಾಳಿ, ಬೈಂದೂರು ನಿಲ್ದಾಣಗಳ ಅಭಿವೃದ್ಧಿ:
ಉಡುಪಿ ಜಿಲ್ಲೆಯ ರೈಲ್ವೆ ಮೂಲಸೌಕರ್ಯಗಳ ಕುರಿತು ಪ್ರಸ್ತಾಪಿಸಿದ ವೈಷ್ಣವ್, "ಜಿಲ್ಲೆಯ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಇಂದ್ರಾಳಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಪ್ಲಾಟ್ಫಾರ್ಮ್ ನಿರ್ಮಿಸುವ ಕಾರ್ಯಸಾಧ್ಯತೆ ಮತ್ತು ಪ್ರಯೋಜನಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳ ತಂಡಕ್ಕೆ ಸೂಚಿಸಲಾಗಿದೆ. ಸ್ಥಳೀಯ ವಾಸ್ತುಶಿಲ್ಪದ ಸೊಗಡನ್ನು ಒಳಗೊಂಡಂತೆ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಭಿವೃದ್ಧಿ ಕಾಮಗಾರಿಗಳಲ್ಲಿ ಒತ್ತು ನೀಡಲಾಗುವುದು" ಎಂದು ಮಾಹಿತಿ ನೀಡಿದರು.
"ಉಡುಪಿಯು ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿರುವುದರಿಂದ, ಅಭಿವೃದ್ಧಿ ಯೋಜನೆಗಳಲ್ಲಿ ಈ ಎರಡೂ ಕ್ಷೇತ್ರಗಳ ಅಗತ್ಯತೆಗಳನ್ನು ಪರಿಗಣಿಸಲಾಗುವುದು. ಅಲ್ಲದೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಮುಖ ರೈಲ್ವೆ ಸಂಪರ್ಕ ಕೇಂದ್ರವಾಗಿರುವ ಬೈಂದೂರು ರೈಲ್ವೆ ನಿಲ್ದಾಣವನ್ನೂ ಅಭಿವೃದ್ಧಿಪಡಿಸಲಾಗುವುದು" ಎಂದು ಭರವಸೆ ನೀಡಿದರು.
ಮಡಗಾಂವ್ನಿಂದ ಹೊರಟು ಕರಾವಳಿ ಭಾಗದ ಮೂಲಕ ಮಂಗಳೂರಿಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ ರೈಲು ಸೇವೆಯು ಪ್ರಯಾಣಿಕರಿಗೆ ಉತ್ತಮ ರೈಲು ಸಂಪರ್ಕವನ್ನು ಒದಗಿಸಲಿದೆ ಎಂದು ಅವರು ಹೇಳಿದರು.
ಕೊಂಕಣ ರೈಲ್ವೆ ವಿಲೀನ ಪ್ರಕ್ರಿಯೆ:
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆಯ ಕುರಿತು ಮಾತನಾಡಿದ ಸಚಿವರು, ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ, ಕರ್ನಾಟಕ ಮತ್ತು ಕೇರಳ ಸರ್ಕಾರಗಳ ಅನುಮೋದನೆಗಾಗಿ ಇನ್ನೂ ಕಾಯಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಗಳು ಮುಂದುವರಿದಿವೆ ಎಂದು ನಡಿದರು.
ಯೂಟ್ಯೂಬ್ ಮತ್ತು ಇತರ ವೆಬ್ ಚಾನೆಲ್ಗಳ ನಿಯಂತ್ರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೂಟ್ಯೂಬ್ ಚಾನೆಲ್ಗಳು ತಮ್ಮ ವೇದಿಕೆಗಳಲ್ಲಿ ಪ್ರಕಟಿಸುವ ವಿಷಯಗಳಿಗೆ ತಾವೇ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು.
ನೂತನವಾಗಿ ಉದ್ಘಾಟನೆಗೊಂಡಿರುವ ಎಫ್ಎಂ ಪ್ರಸಾರ ಕೇಂದ್ರವು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳನ್ನು ಉಡುಪಿ ಹಾಗೂ ನೆರೆಯ ಪ್ರದೇಶಗಳಿಗೆ ತಲುಪಿಸಲಿದೆ. ರೇಡಿಯೋ ಸಂಪರ್ಕವನ್ನು ಹೆಚ್ಚಿಸುವುದರ ಜೊತೆಗೆ, ನೈಸರ್ಗಿಕ ವಿಕೋಪಗಳು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಪ್ರಮುಖ ಸಂವಹನ ಮಾಧ್ಯಮವಾಗಿಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದೆ.
ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.