ಉಡುಪಿ, ನ.14 (DaijiworldNews/AA): ಸಾಕ್ಷರತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಜನನಕ್ಕಿಂತ ಮರಣ ಪ್ರಮಾಣವೇ ಹೆಚ್ಚಾಗಿದ್ದು, ನಕಾರಾತ್ಮಕ ಜನಸಂಖ್ಯಾ ಬೆಳವಣಿಗೆ ದಾಖಲಾಗಿದೆ. ಪ್ರಾಥಮಿಕ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿದ್ದು, ಇದು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಸಾಮಾಜಿಕ ಮತ್ತು ಜನಸಂಖ್ಯಾ ಬದಲಾವಣೆಯ ಸಂಕೇತವಾಗಿದೆ.

ಕಳೆದ ಕೆಲವು ವರ್ಷಗಳ ಜಿಲ್ಲೆಯ ಜನನ ಮತ್ತು ಮರಣ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ, ಹಲವು ವರ್ಷಗಳಲ್ಲಿ ಜನಿಸಿದ ಮಕ್ಕಳ ಸಂಖ್ಯೆಗಿಂತ ಮೃತಪಟ್ಟವರ ಸಂಖ್ಯೆಯೇ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಇದು ಜಿಲ್ಲೆಯಲ್ಲಿ ಜನಸಂಖ್ಯಾ ಬೆಳವಣಿಗೆ ದರ ಕುಸಿಯುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಜನನ ಪ್ರಮಾಣ ಕಡಿಮೆಯಾಗುತ್ತಿದ್ದರೆ, ಮರಣ ಪ್ರಮಾಣ ಸ್ಥಿರವಾಗಿ ಏರಿಕೆಯಾಗುತ್ತಿದೆ. 2021ರಲ್ಲಿ 12,983 ಮಕ್ಕಳು ಜನಿಸಿದ್ದರೆ, 13,934 ಮಂದಿ ಮೃತಪಟ್ಟಿದ್ದಾರೆ. 2022ರಲ್ಲಿ 13,180 ಜನನ ಹಾಗೂ 12,528 ಮರಣ ದಾಖಲಾಗಿದೆ. 2023ರಲ್ಲಿ 12,126 ಮಕ್ಕಳು ಜನಿಸಿದ್ದು, 12,051 ಮಂದಿ ಮೃತಪಟ್ಟಿದ್ದಾರೆ. 2024ರಲ್ಲಿ 11,047 ಜನನ ಮತ್ತು 12,269 ಮರಣ ಸಂಭವಿಸಿದೆ. 2025ರಲ್ಲಿ 11,142 ಮಕ್ಕಳು ಜನಿಸಿದ್ದರೆ, 12,509 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ನಂತರದ ಅವಧಿಯಲ್ಲಿ ಜಿಲ್ಲೆಯು ಹೊಸ ರೀತಿಯ ಜನಸಂಖ್ಯಾ ಅಸಮತೋಲನದ ಆತಂಕವನ್ನು ಎದುರಿಸುತ್ತಿದೆ.
ತಡವಾಗಿ ವಿವಾಹವಾಗುವುದು, ಒಂದೇ ಮಗು ಸಾಕು ಎಂಬ ಮನೋಭಾವ ಮತ್ತು ಬದಲಾಗುತ್ತಿರುವ ಜೀವನಶೈಲಿ ಜನನ ಪ್ರಮಾಣ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಿಂದೂ ಮತ್ತು ಕ್ರೈಸ್ತ ಸಮುದಾಯಗಳ ಯುವ ದಂಪತಿಗಳು ಒಂದೇ ಮಗುವನ್ನು ಪಡೆಯಲು ಹೆಚ್ಚು ಒಲವು ತೋರುತ್ತಿದ್ದಾರೆ. ಇದರಿಂದ ಜನನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕಾಗಿ ಜಿಲ್ಲೆಯ ಯುವಜನತೆ ಬೆಂಗಳೂರು, ಮುಂಬೈ ಮತ್ತು ವಿದೇಶಗಳಿಗೆ ವಲಸೆ ಹೋಗುತ್ತಿರುವುದೂ ಸ್ಥಳೀಯ ಜನನ ಪ್ರಮಾಣ ಕುಸಿಯಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಪ್ರಗತಿಪರ ಸಮಾಜದಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗುತ್ತಲೇ ಹೋದರೆ, ಭವಿಷ್ಯದಲ್ಲಿ ಜಿಲ್ಲೆಯು ಯುವಜನರ ಕೊರತೆಯನ್ನು ಎದುರಿಸಬೇಕಾಗುತ್ತದೆ. ಇದೇ ಪ್ರವೃತ್ತಿ ಮುಂದುವರಿದರೆ, ಉಡುಪಿಯು ವೃದ್ಧರೇ ಹೆಚ್ಚಿರುವ ಜಿಲ್ಲೆಯಾಗಿ ಬದಲಾಗುವ ಅಪಾಯವಿದೆ ಎಂದು ಜನಸಂಖ್ಯಾ ತಜ್ಞರು ಎಚ್ಚರಿಸಿದ್ದಾರೆ.
ಜನಸಂಖ್ಯಾ ಸ್ವರೂಪದಲ್ಲಿನ ಈ ಬದಲಾವಣೆಗಳನ್ನು ಬಹು ಆಯಾಮಗಳಲ್ಲಿ ವಿಶ್ಲೇಷಿಸುವ ಅಗತ್ಯವಿದೆ. ಕಳೆದ ಐದು ವರ್ಷಗಳ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಶೇ. 50ಕ್ಕಿಂತ ಹೆಚ್ಚು ಕುಸಿದಿದೆ.
2021-22ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ 16,279 ಮಕ್ಕಳು ಹೊಸದಾಗಿ 1ನೇ ತರಗತಿಗೆ ದಾಖಲಾಗಿದ್ದರು. ಈ ಸಂಖ್ಯೆ 2022-23ರಲ್ಲಿ 14,166ಕ್ಕೆ, 2023-24ರಲ್ಲಿ 14,073ಕ್ಕೆ, 2024-25ರಲ್ಲಿ 13,821ಕ್ಕೆ ಮತ್ತು 2025-26ರಲ್ಲಿ 11,300ಕ್ಕೆ ಇಳಿಕೆಯಾಗಿದೆ.
2026-27ನೇ ಸಾಲಿನಲ್ಲಿ ದಾಖಲಾತಿ ಪ್ರಮಾಣ ತೀವ್ರವಾಗಿ ಕುಸಿದಿದೆ. ಜೂನ್ ತಿಂಗಳ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಾದ್ಯಂತ ಒಟ್ಟು 7,256 ವಿದ್ಯಾರ್ಥಿಗಳು ಮಾತ್ರ ನೇ ತರಗತಿಗೆ ದಾಖಲಾಗಿದ್ದಾರೆ. ಈ ಪೈಕಿ 5,974 ಮಕ್ಕಳು ಖಾಸಗಿ ಶಾಲೆಗಳಿಗೆ, 3,063 ಮಕ್ಕಳು ಸರ್ಕಾರಿ ಶಾಲೆಗಳಿಗೆ ಮತ್ತು ಕೇವಲ 565 ಮಕ್ಕಳು ಅನುದಾನಿತ ಶಾಲೆಗಳಿಗೆ ಸೇರಿದ್ದಾರೆ. ಇದು ಜಿಲ್ಲೆಯಲ್ಲಿ ಮಕ್ಕಳ ಜನನ ಪ್ರಮಾಣ ಕುಸಿಯುತ್ತಿರುವುದಕ್ಕೆ ಸ್ಪಷ್ಟ ಸೂಚನೆಯಾಗಿದೆ.
"ದೇಶದಲ್ಲಿ ಪ್ರತಿದಿನ ಅಂದಾಜು 63,000 ಮಕ್ಕಳು ಜನಿಸಿದರೆ, ಸುಮಾರು 27,000 ಮಂದಿ ಮೃತಪಡುತ್ತಾರೆ. ಆದರೆ ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 11,142 ಮಕ್ಕಳು ಜನಿಸಿದ್ದು, 12,509 ಮಂದಿ ಮೃತಪಟ್ಟಿದ್ದಾರೆ. ಅಂದರೆ ಜಿಲ್ಲೆಯಲ್ಲಿ ಜನನ ಮತ್ತು ಮರಣ ಪ್ರಮಾಣ ಹೆಚ್ಚು ಕಡಿಮೆ ಸಮನಾಗಿದೆ. ತಡವಾದ ವಿವಾಹ ಮತ್ತು ಒಂದೇ ಮಗು ಸಾಕು ಎಂಬ ನಿರ್ಧಾರ ಇದಕ್ಕೆ ಮುಖ್ಯ ಕಾರಣ. ಅಲ್ಲದೆ, ಜಿಲ್ಲೆಯ ಜನಸಾಮಾನ್ಯರ ಜೀವಿತಾವಧಿಯೂ ಹೆಚ್ಚಾಗಿರುವುದು ಕಂಡುಬಂದಿದೆ" ಎಂದು ಮಣಿಪಾಲ ಕೆಎಂಸಿ, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ತಿಳಿಸಿದ್ದಾರೆ.