ಬೆಳ್ತಂಗಡಿ, ನ.15 (DaijiworldNews/AA): ಪುಂಜಾಲಕಟ್ಟೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ರಾಜಕೀಯ ಭಾಷಣ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾಷಣದ ವೇಳೆ ಶಾಸಕರು "ದರಿದ್ರ ಕಾಂಗ್ರೆಸ್ ಪಕ್ಷ"ವನ್ನು ಬೆಂಬಲಿಸದಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿರುವುದು ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಭವನದ ಉದ್ಘಾಟನೆಗೆ ಆರಂಭದಲ್ಲಿ ಸಿದ್ಧತೆ ನಡೆಸಲಾಗಿತ್ತು. ಆದರೆ, ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಈ ಕಟ್ಟಡದ ಉದ್ಘಾಟನೆಯನ್ನು ಶಿಷ್ಟಾಚಾರ ಮತ್ತು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಆಯೋಜಿಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ (ಸಿಇಒ) ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲಾಗಿತ್ತು ಎನ್ನಲಾಗಿದೆ.
ನವೆಂಬರ್ 14ರಂದು ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಖಾಸಗಿ ಸಂಸ್ಥೆಯೊಂದನ್ನು ಸನ್ಮಾನಿಸಲು ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜ, ಈ ವಿಚಾರವಾಗಿ ರಾಜಕೀಯ ವಾಗ್ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, "ಬೆಳ್ತಂಗಡಿಯಲ್ಲಿರುವ ದರಿದ್ರ ಕಾಂಗ್ರೆಸ್ ಪಕ್ಷವು ನಿಮ್ಮ ಶಾಲೆಗೆ ಒಂದು ರೂಪಾಯಿಯನ್ನೂ ನೀಡಿಲ್ಲ. ಅವರು ದೂರು ನೀಡಿ, ಇಲ್ಲಿನ ಶಿಕ್ಷಕರಿಗೆ ಕಿರುಕುಳ ನೀಡಿದ್ದಾರೆ ಮತ್ತು ಶಾಲೆಯ ಕಾರ್ಯಕ್ರಮವನ್ನೇ ಬದಲಾಯಿಸುವಂತೆ ಮಾಡಿದ್ದಾರೆ. ಇಂತಹ ದರಿದ್ರ ಪಕ್ಷವನ್ನು ನಂಬಬೇಡಿ. ದೇಶವು ನರೇಂದ್ರ ಮೋದಿಯವರ ನಾಯಕತ್ವದಲ್ಲಿದೆ" ಎಂದು ಹೇಳಿದ್ದಾರೆ.
ತಮ್ಮ ಭಾಷಣದ ಕೊನೆಯಲ್ಲಿ ದೇಶದ ಪರ ಘೋಷಣೆಗಳನ್ನು ಕೂಗಿಸುವುದರ ಜೊತೆಗೆ, ಶಾಲಾ ಮಕ್ಕಳ ಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿಯೂ ಶಾಸಕರು ಘೋಷಣೆಗಳನ್ನು ಕೂಗಿಸಿದ್ದಾರೆ.
ಶಾಲಾ ಆವರಣದೊಳಗೆ ಶಾಸಕರು ಮಾಡಿರುವ ಈ ರಾಜಕೀಯ ಭಾಷಣದ ವಿಡಿಯೋ ಸದ್ಯ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.