ಕಾಸರಗೋಡು, ನ.16 (DaijiworldNews/AA): ಗಡಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಕಾಸರಗೋಡು ರೈಲು ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. 'ಅಮೃತ್ ಭಾರತ್ ನಿಲ್ದಾಣ ಯೋಜನೆ'ಯಡಿ ಕೈಗೆತ್ತಿಕೊಳ್ಳಲಾಗಿರುವ ಸಮಗ್ರ ನವೀಕರಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಎಸ್ಕಲೇಟರ್ ಮತ್ತು ಸುಸಜ್ಜಿತ ತುರ್ತು ವೈದ್ಯಕೀಯ ಕೊಠಡಿ ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ಹಲವು ಪ್ರಮುಖ ದೂರದ ರೈಲುಗಳಿಗೆ ಇಲ್ಲಿ ನಿಲುಗಡೆಯಿದ್ದು, ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ. ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ.
50 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ನವೀಕರಣ
ಅಮೃತ್ ಭಾರತ್ ಯೋಜನೆಯಡಿ ಸುಮಾರು 50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿಲ್ದಾಣದ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಯೋಜನೆಯ ಭಾಗವಾಗಿ, ಪಾದಚಾರಿ ಮೇಲ್ಸೇತುವೆಗೆ 4.16 ಕೋಟಿ ರೂ. ವೆಚ್ಚದಲ್ಲಿ ಎಸ್ಕಲೇಟರ್ ಅಳವಡಿಸಲಾಗುತ್ತಿದೆ. ಪಾಲಕ್ಕಾಡ್ ರೈಲ್ವೆ ವಿಭಾಗವು ಆರಂಭಿಕ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಗುತ್ತಿಗೆದಾರರು ಪ್ರಸ್ತುತ ಯಂತ್ರೋಪಕರಣಗಳನ್ನು ಜೋಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾಮಗಾರಿ ಪೂರ್ಣಗೊಂಡ ಬಳಿಕ ಎಸ್ಕಲೇಟರ್ ಅನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2023ರ ಆಗಸ್ಟ್ನಲ್ಲಿ ಈ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
'ಯೆನ್ಕೇರ್' ತುರ್ತು ವೈದ್ಯಕೀಯ ಕೊಠಡಿ
ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾಲಯದ (ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ) ಸಹಯೋಗದೊಂದಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ 'ಯೆನ್ಕೇರ್' ತುರ್ತು ವೈದ್ಯಕೀಯ ಕೊಠಡಿಯನ್ನು ಸ್ಥಾಪಿಸಲಾಗುತ್ತಿದೆ.
ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಗೆ ಹೃದಯಾಘಾತ ಸಂಭವಿಸಿದಲ್ಲಿ ಅಥವಾ ಇತರ ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಗಳು ಎದುರಾದಾಗ 'ಗೋಲ್ಡನ್ ಅವರ್' ಅವಧಿಯಲ್ಲಿ ತಕ್ಷಣದ ಜೀವರಕ್ಷಕ ಪ್ರಥಮ ಚಿಕಿತ್ಸೆ ನೀಡುವುದು ಈ ಸೌಲಭ್ಯದ ಮುಖ್ಯ ಉದ್ದೇಶವಾಗಿದೆ.
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲೂ ಇಂತಹದ್ದೇ ಸೌಲಭ್ಯಗಳನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಗಡಿ ಭಾಗದ ಪ್ರಯಾಣಿಕರಿಗೂ ತುರ್ತು ವೈದ್ಯಕೀಯ ನೆರವು ದೊರೆಯಲಿದೆ.