ಮಂಗಳೂರು, ನ.16 (DaijiworldNews/TA): ಛಲವೊಂದಿದ್ದರೆ ಎಂತಹ ಕಠಿಣ ಸವಾಲನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಮಂಗಳೂರಿನ ಯುವತಿ ಸೋನಲ್ ಜೆಸ್ಸಿಕಾ ಕ್ರಾಸ್ತಾ ಅವರ ಸಾಧನೆಯೇ ಸಾಕ್ಷಿ. ಹಿಮಾಲಯದ ಕೊರೆಯುವ ಚಳಿ, ದುರ್ಗಮ ಪರ್ವತ ಹಾದಿ, ಆಮ್ಲಜನಕದ ಕೊರತೆಯ ಸವಾಲುಗಳ ನಡುವೆ ಬರೋಬ್ಬರಿ 17,000 ಅಡಿ ಎತ್ತರದ ಪರ್ವತವನ್ನು ಏರುವ ಮೂಲಕ ಮಂಗಳೂರಿನ ಈ ಯುವ ಎನ್ಸಿಸಿ ಕೆಡೆಟ್ ಗಮನಾರ್ಹ ಸಾಧನೆ ಮಾಡಿದ್ದಾರೆ.



ವಾಮಂಜೂರಿನ ವಿಲ್ಫ್ರೆಡ್ ಮತ್ತು ಲಿಡ್ವಿನ್ ಕ್ರಾಸ್ತಾ ದಂಪತಿಯ ಪುತ್ರಿ ಸಿಸಿಪಿಎಲ್ ಸೋನಲ್ ಜೆಸ್ಸಿಕಾ ಕ್ರಾಸ್ತಾ ಅವರು ದಕ್ಷಿಣ ಸಿಕ್ಕಿಂನ ಇಂಡಿಯನ್ ಹಿಮಾಲಯನ್ ಸೆಂಟರ್ ಫಾರ್ ಅಡ್ವೆಂಚರ್ ಅಂಡ್ ಇಕೋ-ಟೂರಿಸಂ ಆಯೋಜಿಸಿರುವ ವಿಶೇಷ ಮೂಲಭೂತ ಪರ್ವತಾರೋಹಣ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ. ಅಕ್ಟೋಬರ್ 23ರಿಂದ ನವೆಂಬರ್ 20ರವರೆಗೆ ನಡೆಯುತ್ತಿರುವ ಈ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಅಡಿಯಲ್ಲಿ 6 ಕರ್ನಾಟಕ ಏರ್ ಸ್ಕ್ವಾಡ್ರನ್ ಎನ್ಸಿಸಿಯನ್ನು ಪ್ರತಿನಿಧಿಸಿ ಸೋನಲ್ ಸೇರಿದಂತೆ ಮೂವರು ಕೆಡೆಟ್ಗಳು ಪಾಲ್ಗೊಂಡಿದ್ದಾರೆ. ಸಿಸಿಪಿಎಲ್ ಲಿಖಿತಾ ಆರ್.ಕೆ. ಮತ್ತು ಎಲ್ಎಫ್ಸಿ ಹೃತಿಶಾ ಡಿ. ಪೂಜಾರಿ ಇತರ ಇಬ್ಬರು ಕೆಡೆಟ್ಗಳು.
ಪರ್ವತಾರೋಹಣ ಎನ್ನುವುದು ಕೇವಲ ಎತ್ತರದ ಪರ್ವತ ಏರುವ ಸಾಹಸವಲ್ಲ. ಅದಕ್ಕೆ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಸ್ಥೈರ್ಯ, ಶಿಸ್ತು, ತಾಳ್ಮೆ ಮತ್ತು ತಂಡದ ಸಹಕಾರವೂ ಅತ್ಯಗತ್ಯ. ಈ ಎಲ್ಲ ಗುಣಗಳನ್ನು ಕೆಡೆಟ್ಗಳಲ್ಲಿ ಬೆಳೆಸುವ ಉದ್ದೇಶದಿಂದ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ತರಬೇತಿಯ ಆರಂಭದಲ್ಲೇ ಪ್ರತಿದಿನ ಬೆಳಿಗ್ಗೆ ಕಠಿಣ ದೈಹಿಕ ವ್ಯಾಯಾಮ ಮತ್ತು ಫಿಟ್ನೆಸ್ ತರಬೇತಿಗಳನ್ನು ನೀಡಲಾಯಿತು. ಪರ್ವತಾರೋಹಣದ ವೇಳೆ ಎದುರಾಗುವ ಸವಾಲುಗಳನ್ನು ಎದುರಿಸಲು ಅಗತ್ಯವಾದ ಸಹಿಷ್ಣುತೆ, ಶಕ್ತಿ ಮತ್ತು ಮಾನಸಿಕ ದೃಢತೆಯನ್ನು ಬೆಳೆಸುವತ್ತ ವಿಶೇಷ ಗಮನ ಹರಿಸಲಾಯಿತು.
ಇದರೊಂದಿಗೆ ಸ್ಪೋರ್ಟ್ಸ್ ಕ್ಲೈಂಬಿಂಗ್, ರಾಕ್ ಕ್ಲೈಂಬಿಂಗ್ ಹಾಗೂ ಅಡ್ವಾನ್ಸ್ಡ್ ರಾಕ್ ಕ್ಲೈಂಬಿಂಗ್ನ ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು. ಪರ್ವತಾರೋಹಣದ ತಾಂತ್ರಿಕ ವಿಚಾರಗಳು, ಸುರಕ್ಷತಾ ಕ್ರಮಗಳು ಹಾಗೂ ಪರ್ವತಗಳಲ್ಲಿ ಬಳಸುವ ವಿವಿಧ ರೀತಿಯ ಗಂಟುಗಳು ಮತ್ತು ಹಿಚ್ಗಳ ಬಗ್ಗೆಯೂ ಕೆಡೆಟ್ಗಳಿಗೆ ತಿಳಿಸಿಕೊಡಲಾಯಿತು. ಅನುಭವಿ ಬೋಧಕರು ಮಧ್ಯಾಹ್ನದ ಅವಧಿಯಲ್ಲಿ ಸಿದ್ಧಾಂತ ತರಗತಿಗಳನ್ನು ನಡೆಸಿ ಪರ್ವತಾರೋಹಣದ ವಿವಿಧ ಆಯಾಮಗಳ ಬಗ್ಗೆ ತರಬೇತಿ ನೀಡಿದರು. ಒಂಬತ್ತು ದಿನಗಳ ಸಾಂಸ್ಥಿಕ ತರಬೇತಿಯ ಬಳಿಕ ಕೆಡೆಟ್ಗಳು ಉತ್ತರ ಸಿಕ್ಕಿಂನ ಪರ್ವತ ಪ್ರದೇಶಗಳಿಗೆ ತೆರಳಿದರು. ಇಲ್ಲಿ 15 ದಿನಗಳ ತೀವ್ರ ಪರ್ವತ ತರಬೇತಿ ಆಯೋಜಿಸಲಾಗಿತ್ತು. ಪರ್ವತ ಪ್ರದೇಶದಲ್ಲಿ ಡೇರೆಗಳನ್ನು ಹಾಕಿಕೊಂಡು ವಾಸಿಸುವುದು, ತೀವ್ರ ಚಳಿಯನ್ನು ಎದುರಿಸುವುದು ಹಾಗೂ ಪ್ರತಿಕೂಲ ಹವಾಮಾನಕ್ಕೆ ಹೊಂದಿಕೊಳ್ಳುವುದು ಕೆಡೆಟ್ಗಳಿಗೆ ಸಂಪೂರ್ಣ ಹೊಸ ಅನುಭವವಾಗಿತ್ತು. ಸಮುದ್ರ ಮಟ್ಟದಿಂದ ಸುಮಾರು 15,000 ಅಡಿ ಎತ್ತರದ ಪ್ರದೇಶಗಳಲ್ಲಿ ತರಬೇತಿ ನೀಡಲಾಗಿದ್ದು, ಸುಮಾರು 14,500 ಅಡಿ ಎತ್ತರದಲ್ಲಿದ್ದ ಬೇಸ್ ಕ್ಯಾಂಪ್ನಿಂದ ಪರ್ವತಾರೋಹಣದ ಅಭ್ಯಾಸ ಮುಂದುವರಿಸಲಾಯಿತು.
ಸಾಮಾನ್ಯ ಪರಿಸರದಿಂದ ಸಂಪೂರ್ಣ ಭಿನ್ನವಾಗಿದ್ದ ಈ ಪರ್ವತ ಪ್ರದೇಶದಲ್ಲಿ ಪ್ರತಿಯೊಂದು ಹೆಜ್ಜೆಯೂ ಸವಾಲಿನಿಂದ ಕೂಡಿತ್ತು. ದೈಹಿಕ ಆಯಾಸ, ಕೊರೆಯುವ ಚಳಿ ಮತ್ತು ದುರ್ಗಮ ಹಾದಿಗಳ ನಡುವೆಯೂ ಕೆಡೆಟ್ಗಳು ತಮ್ಮ ತರಬೇತಿಯನ್ನು ಮುಂದುವರಿಸಿದರು. ತರಬೇತಿಯ ಅತ್ಯಂತ ರೋಚಕ ಹಾಗೂ ಸವಾಲಿನ ಘಟ್ಟವಾಗಿದ್ದುದು ಅಂತಿಮ ಪರ್ವತಾರೋಹಣ ಕಾರ್ಯಾಚರಣೆ. ಬರೋಬ್ಬರಿ 17,000 ಅಡಿ ಎತ್ತರವನ್ನು ತಲುಪುವುದು ಕೆಡೆಟ್ಗಳ ಮುಂದಿದ್ದ ದೊಡ್ಡ ಗುರಿಯಾಗಿತ್ತು. ಕಠಿಣ ಭೂಪ್ರದೇಶ, ತೀವ್ರ ಶೀತ ಹವಾಮಾನ ಮತ್ತು ನಿರಂತರ ಪರ್ವತಾರೋಹಣದಿಂದ ಉಂಟಾದ ದೈಹಿಕ ಬಳಲಿಕೆಯ ನಡುವೆಯೂ ಕೆಡೆಟ್ಗಳು ಧೈರ್ಯದಿಂದ ಮುನ್ನಡೆದರು. ಈ ಸವಾಲಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ 30 ಮಂದಿ ತಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಿದರು. 17,000 ಅಡಿ ಎತ್ತರವನ್ನು ತಲುಪಿದ ಕ್ಷಣ ಪ್ರತಿಯೊಬ್ಬರ ಪಾಲಿಗೂ ಹೆಮ್ಮೆ, ಸಂತಸ ಮತ್ತು ಜೀವನಪೂರ್ತಿ ಮರೆಯಲಾಗದ ಅನುಭವವಾಗಿ ಉಳಿಯಿತು. ಮಂಗಳೂರಿನ ವಾಮಂಜೂರಿನ ಸೋನಲ್ ಜೆಸ್ಸಿಕಾ ಕ್ರಾಸ್ತಾ ಅವರು ಹಿಮಾಲಯದ ಎತ್ತರದಲ್ಲಿ ಮೆರೆದ ಈ ಸಾಹಸ ಮತ್ತು ಸಾಧನೆ ಸ್ಥಳೀಯರಿಗೆ ಹೆಮ್ಮೆಯ ಸಂಗತಿಯಾಗಿದ್ದು, ಯುವಜನತೆಗೆ ಪ್ರೇರಣೆಯಾಗಿದೆ.