ಮಂಗಳೂರು, ನ.17 (DaijiworldNews/TA): ನಗರದ ಕದ್ರಿ ಸಿಟಿ ಆಸ್ಪತ್ರೆ ಬಳಿಯ ರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಪೂರ್ಣಗೊಂಡಿಲ್ಲ. ಕಳೆದ ಎಂಟು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳು, ವಾಹನ ಸವಾರರು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.










ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಹಲವು ಭಾಗಗಳಲ್ಲಿ ರಸ್ತೆ ಹಾಳಾಗಿ ಸಂಚಾರಕ್ಕೆ ಅಯೋಗ್ಯವಾಗಿದೆ. ದೀರ್ಘಕಾಲದಿಂದ ಕಾಮಗಾರಿ ಅಪೂರ್ಣವಾಗಿ ಉಳಿದಿರುವುದರಿಂದ ಈ ಭಾಗದ ಜನರ ದೈನಂದಿನ ಬದುಕು ದುಸ್ತರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.
ಈ ರಸ್ತೆಯು ಎರಡು ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಪ್ರತಿನಿತ್ಯ ರೋಗಿಗಳು, ಆಂಬ್ಯುಲೆನ್ಸ್ಗಳು ಹಾಗೂ ಇತರ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. ಆದರೆ ರಸ್ತೆ ಅಗೆದು ಹಾಳು ಮಾಡಿರುವುದರಿಂದ ತುರ್ತು ವಾಹನಗಳ ಸಂಚಾರಕ್ಕೂ ತೀವ್ರ ಅಡಚಣೆಯಾಗುತ್ತಿದೆ. ಆಂಬ್ಯುಲೆನ್ಸ್ಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವುದೇ ಸವಾಲಾಗಿದೆ. ಆಸ್ಪತ್ರೆಗಳಿಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರೂ ರಸ್ತೆ ಅವ್ಯವಸ್ಥೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
ಅಪೂರ್ಣ ಕಾಮಗಾರಿಯಿಂದ ಸ್ಥಳೀಯ ವ್ಯಾಪಾರಿಗಳ ಬದುಕಿಗೂ ಹೊಡೆತ ಬಿದ್ದಿದೆ. ರಸ್ತೆ ಅವ್ಯವಸ್ಥೆ, ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಹಾಗೂ ಧೂಳಿನ ಸಮಸ್ಯೆಯಿಂದ ಗ್ರಾಹಕರು ಅಂಗಡಿಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವ್ಯಾಪಾರ ವಹಿವಾಟು ಕುಸಿದಿದ್ದು, ಆರ್ಥಿಕ ನಷ್ಟ ಎದುರಿಸುತ್ತಿರುವುದಾಗಿ ಅಂಗಡಿಕಾರರು ಅಳಲು ತೋಡಿಕೊಂಡಿದ್ದಾರೆ.
ಅಗೆದ ರಸ್ತೆಯಿಂದ ನಿರಂತರವಾಗಿ ಧೂಳು ಏಳುತ್ತಿದ್ದು, ಒಳಚರಂಡಿ ಸೋರಿಕೆಯಿಂದ ದುರ್ವಾಸನೆ ಹರಡುತ್ತಿದೆ. ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿರುವುದರಿಂದ ಸ್ಥಳೀಯ ನಿವಾಸಿಗಳು, ಅಂಗಡಿಗಳಲ್ಲಿ ಕೆಲಸ ಮಾಡುವವರು ಹಾಗೂ ಹೋಟೆಲ್ಗಳಿಗೆ ಬರುವ ಗ್ರಾಹಕರ ಆರೋಗ್ಯದ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಮಳೆಗಾಲದಲ್ಲಿ ಈ ಪ್ರದೇಶದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಒಳಚರಂಡಿ ಪೈಪ್ಲೈನ್ಗಳಿಗೆ ಹಾನಿಯಾಗಿರುವುದರಿಂದ ಸೋರಿಕೆ ಮತ್ತು ಕೊಳಚೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ವ್ಯಾಪಾರಿಗಳು ಆರೋಪಿಸಿದ್ದಾರೆ. ಒಳಚರಂಡಿ ಸೋರಿಕೆಯನ್ನು ಶಾಶ್ವತವಾಗಿ ಸರಿಪಡಿಸುವ ಬದಲು, ಹಾನಿಗೊಳಗಾದ ಭಾಗಗಳಿಗೆ ಮಣ್ಣು ಹಾಕಿ ಮುಚ್ಚಲಾಗುತ್ತಿದೆ ಎಂಬುದು ಅವರ ಮತ್ತೊಂದು ಆರೋಪ. ಇದರಿಂದ ಸಮಸ್ಯೆ ಮತ್ತೆ ಮತ್ತೆ ಮರುಕಳಿಸುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ಹಲವು ಬಾರಿ ತಂದಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ದೂರಿದ್ದಾರೆ. ಕಾಮಗಾರಿ ವಿಳಂಬದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ಸ್ಥಳೀಯ ವ್ಯಾಪಾರವೂ ನಷ್ಟ ಅನುಭವಿಸುತ್ತಿದೆ. ಈ ಕುರಿತು ಮಾತನಾಡಿದ ಸೆಲ್ಮಾ ಡಿ'ಪೌಲಾ ಮತ್ತು ಲವೀನಾ ಅವರು, ಕಾಮಗಾರಿ ವಿಳಂಬದಿಂದ ಸಾರ್ವಜನಿಕರು ಹಾಗೂ ಅಂಗಡಿಕಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸ್ಥಳೀಯ ಅಂಗಡಿಕಾರರಾದ ಗೋಪಾಲ ಮತ್ತು ವಿನೋದ್ ಕೂಡ ತಮ್ಮ ಸಂಕಷ್ಟವನ್ನು ವಿವರಿಸಿದರು. ಆಂಬ್ಯುಲೆನ್ಸ್ ಚಾಲಕರಾಗಿ ಕಾರ್ಯನಿರ್ವಹಿಸುವ ವಿನೋದ್ ಅವರು, ತುರ್ತು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವಾಗ ಎದುರಾಗುವ ಅಡಚಣೆಗಳ ಬಗ್ಗೆ ಗಮನ ಸೆಳೆದರು.
ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದಿಂದ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಯನ್ನು ಕೂಡಲೇ ಪುನರಾರಂಭಿಸಿ ಪೂರ್ಣಗೊಳಿಸಬೇಕು. ಹಾನಿಗೊಳಗಾದ ರಸ್ತೆಯನ್ನು ದುರಸ್ತಿಗೊಳಿಸಿ, ಒಳಚರಂಡಿ ಸೋರಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಹಾಗೂ ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು ಎಂದು ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಾರೆಯೇ ಅಥವಾ ಕದ್ರಿ ಸಿಟಿ ಆಸ್ಪತ್ರೆ ರಸ್ತೆಯ ಜನರ ಸಂಕಷ್ಟ ಮುಂದುವರಿಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.