ಬಂಟ್ವಾಳ, ನ.17 (DaijiworldNews/TA): ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹವನ್ನು ವಿರೋಧಿಸಿ ಅನುಮತಿ ಪಡೆಯದೆ ಪೋಸ್ಟರ್ ಪ್ರದರ್ಶಿಸಿದ ಆರೋಪದ ಮೇಲೆ SDPI ಕಾರ್ಯಕರ್ತರು ಹಾಗೂ ಬೆಂಬಲಿಗರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.11ರಂದು ಸಂಜೆ 4ರಿಂದ 5 ಗಂಟೆಯ ಅವಧಿಯಲ್ಲಿ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಬಳಿ ಸುಮಾರು 10ರಿಂದ 15 ಮಂದಿ SDPI ಕಾರ್ಯಕರ್ತರು ಹಾಗೂ ಬೆಂಬಲಿಗರು ಅನಧಿಕೃತವಾಗಿ ಜಮಾಯಿಸಿ, ಟೋಲ್ ಸಂಗ್ರಹವನ್ನು ವಿರೋಧಿಸುವ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದರು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೂರಿನಲ್ಲಿ ತಿಳಿಸಿದೆ. ಈ ಕುರಿತು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಅವರು ನ.16ರಂದು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ 2013ರ ಡಿ.5ರಿಂದ ಕಾರ್ಯಾರಂಭ ಮಾಡಿದ್ದು, ಬಿ.ಸಿ.ರಸ್ತೆಯಿಂದ ಪಡೀಲ್ ವರೆಗಿನ ಸುಮಾರು 16 ಕಿ.ಮೀ. ಹಾಗೂ ಪಡೀಲ್ ಜಂಕ್ಷನ್ ನಿಂದ ನಂತೂರು ಜಂಕ್ಷನ್ ವರೆಗಿನ 1.60 ಕಿ.ಮೀ. ಬೈಪಾಸ್ ರಸ್ತೆಗೆ ಸಂಬಂಧಿಸಿದ ಟೋಲ್ ಸಂಗ್ರಹ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಾಧಿಕಾರದ ಅಧೀನದ ಜಾಗದಲ್ಲಿ ಪೂರ್ವಾನುಮತಿ ಇಲ್ಲದೆ ಸಭೆ, ಪ್ರತಿಭಟನೆ ನಡೆಸುವುದು, ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಪ್ರದರ್ಶಿಸುವುದು ನಿಯಮಬಾಹಿರ. ಇಂತಹ ಚಟುವಟಿಕೆಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವುದರ ಜತೆಗೆ ರಸ್ತೆ ಬಳಕೆದಾರರಿಗೆ ಅನಾನುಕೂಲ ಉಂಟಾಗುವ ಸಾಧ್ಯತೆಯಿದೆ ಎಂದು NHAI ದೂರಿನಲ್ಲಿ ಆಕ್ಷೇಪಿಸಿದೆ.
ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಜಾಗದಲ್ಲಿ ಅನಧಿಕೃತವಾಗಿ ಪೋಸ್ಟರ್ ಪ್ರದರ್ಶಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ದೂರಿನ ಆಧಾರದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.