ಉಡುಪಿ, ನ.17 (DaijiworldNews/AK): 2026: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆ 34ನೇ ಘಟಿಕೋತ್ಸವದ ಸಂಭ್ರಮಕ್ಕೆ ಸಜ್ಜಾಗಿದ್ದು, ಒಟ್ಟು 10,277 ವಿದ್ಯಾರ್ಥಿಗಳು ಈ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ.








ನವೆಂಬರ್ 19ರಿಂದ 22ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, 7,694 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಹಾಗೆಯೇ, ಬೆಂಗಳೂರು ಕ್ಯಾಂಪಸ್ನಲ್ಲಿ ನವೆಂಬರ್ 28 ಮತ್ತು 29ರಂದು ನಡೆಯುವ ಸಮಾರಂಭದಲ್ಲಿ 2,583 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಅಲ್ಲದೆ, ವಿವಿಧ ವಿಷಯಗಳಲ್ಲಿ ಸಂಶೋಧನೆ ನಡೆಸಿರುವ 207 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ (ಪಿಎಚ್ಡಿ) ಪದವಿ ಪ್ರದಾನ ಮಾಡಲಾಗುವುದು.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಅವರ ಪೋಷಕರು, ಶೈಕ್ಷಣಿಕ ಮತ್ತು ಔದ್ಯಮಿಕ ಕ್ಷೇತ್ರದ ಗಣ್ಯರು ಹಾಗೂ ಬೋಧಕ ವರ್ಗವನ್ನು ಒಂದೆಡೆ ಸೇರಿಸುವ ಅರ್ಥಪೂರ್ಣ ವೇದಿಕೆಯಾಗಿ ಈ ಸಮಾರಂಭ ರೂಪುಗೊಳ್ಳಲಿದೆ. ಈ ಘಟಿಕೋತ್ಸವ ಸಮಾರಂಭವನ್ನು ಪದವೀಧರರ ಶೈಕ್ಷಣಿಕ ಪಯಣದ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ.
ಈ ಬಾರಿಯ ಘಟಿಕೋತ್ಸವದಲ್ಲಿ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಹೆಸರು ಮಾಡಿರುವ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಮಣಿಪಾಲ – ಮಾಹೆ ಕ್ಯಾಂಪಸ್ ಘಟಿಕೋತ್ಸವ
ನವೆಂಬರ್ 19, 2026: ಅಮಿತ್ ಗೋಸ್ಸೇನ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೋನೆ ಎಲಿವೇಟರ್ಸ್ ಇಂಡಿಯ 7 ಸೌತ್ ಏಶಿಯಾ
ನವೆಂಬರ್ 20, 2026: ಕೊಜಿ ತ್ಸುಬೋಟಾ, ನಿರ್ದೇಶಕರು ಮತ್ತು ಚೀಫ್ ಟ್ರಾನ್ಸ್ಫಾರ್ಮೇಶನ್ ಆಫೀಸರ್ (ಸಿಟಿಆರ್ಒ), ಹಿಟಾಚಿ ಸಿಸ್ಟಮ್ಸ್, ಇಂಡಿಯ
ನವೆಂಬರ್ 21, 2026: ಪ್ರೊ. ಜೋ ರೈಕ್ರಾಫ್ಟ್-ಮಲೋನ್, ಸಹಕುಲಪತಿ, ಸಂಶೋಧನೆ ಮತ್ತು ಔದ್ಯಮಿಕ ವಿಭಾಗ, ಲ್ಯಾಂಕಸ್ಟರ್, ಯುಕೆ
ನವೆಂಬರ್ 22, 2026: ಡಾ. ಕ್ಯಾಥಿ ವಿಲ್ಸನ್, ಅಧ್ಯಕ್ಷರು ಮತ್ತು ಕುಲಪತಿಗಳು, ನ್ಯೂಬ್ರನ್ಸ್ವಿಕ್ ವಿಶ್ವವಿದ್ಯಾಲಯ (ಯುಎನ್ಬಿ), ಕೆನಡ.
ಬೆಂಗಳೂರು – ಮಾಹೆ ಕ್ಯಾಂಪಸ್ ಘಟಿಕೋತ್ಸವ
ನವೆಂಬರ್ 28, 2026: ತ್ರಿದೀಬ್ ರಾಯ್, ವ್ಯವಸ್ಥಾಪಕ ನಿರ್ದೇಶಕರು, ಸಾರ್ವಜನಿಕ ವಲಯ ಮತ್ತು ವಾಣಿಜ್ಯಿಕ ಮಾರುಕಟ್ಟೆ ವಿಭಾಗ, ಸಿಸ್ಕೋ ಇಂಡಿಯ & ಸಾರ್ಕ್.
ನವೆಂಬರ್ 29, 2026: ಭರತ್ ಆರ್. ಶೇಷ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಫಿಲಿಪ್ಸ್ ಇಂಡಿಯ ಲಿಮಿಟೆಡ್.
ಘಟಿಕೋತ್ಸವದ ವಿವರಗಳನ್ನು ನೀಡಿದ, ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು, “ಇನ್ನೆರಡು ದಿನಗಳಲ್ಲಿ ಮಾಹೆಯ 34ನೇ ಘಟಿಕೋತ್ಸವ ಸಂಭ್ರಮ ಶುರುವಾಗಲಿದೆ. ನಮ್ಮ ಪದವೀಧರರು ಪದವಿಯ ಜತೆಗೆ ಚಿಂತನಶೀಲ ಪ್ರಜ್ಞೆ, ಸಮಾಜಮುಖಿ ಧೋರಣೆ ಮತ್ತು ಸಮುದಾಯಕ್ಕೆ ಉಪಯುಕ್ತವಾಗುವ ವಾತಾವರಣವನ್ನು ನಿರ್ಮಿಸುವ ಆಶಯದೊಂದಿಗೆ ಮುನ್ನಡೆಯುತ್ತಾರೆ ಎನ್ನುವ ವಿಶ್ವಾಸವಿದೆ” ಎಂದು ಹೇಳಿದರು.
ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು ಮಾತನಾಡಿ, “ಪ್ರತಿಯೊಂದು ಮಹತ್ತ್ವದ ಪಯಣವೂ ಒಂದು ಪುಟ್ಟ ಹೆಜ್ಜೆಯಿಂದ ಆರಂಭವಾಗುತ್ತದೆ. ನಮ್ಮ ಪದವೀಧರರು ಇಡುವ ಪ್ರಥಮ ಹೆಜ್ಜೆಯು ಅವರ ಭವಿಷ್ಯಕ್ಕೆ ಭವ್ಯಪಥವನ್ನು ತೆರೆಯಲಿದೆ ಎನ್ನುವ ಭರವಸೆ ನಮ್ಮದು. ರಾಷ್ಟ್ರ ಮತ್ತು ವಿಶ್ವಕ್ಕೆ ನುರಿತ ವೃತ್ತಿಪರರನ್ನಷ್ಟೇ ಅಲ್ಲ, ಉತ್ತಮ ನಾಗರಿಕರನ್ನೂ ನೀಡಬೇಕು ಎಂಬ ನಂಬಿಕೆಯಲ್ಲಿ ಮಾಹೆ ಕಾರ್ಯನಿರ್ವಹಿಸುತ್ತಿದೆ. ಯುವಸಮುದಾಯವನ್ನು ಪದವಿಗಳೊಂದಿಗೆ ಸಾಮಾಜಿಕ ಮತ್ತು ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಉದಾರ ಆಶಯದೊಂದಿಗೆ ಬೀಳ್ಕೊಡುತ್ತಿದ್ದೇವೆ” ಎಂದು ಹೇಳಿದರು.
ನಾಲ್ಕು ದಿನವೂ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಸಮಾರಂಭ ಶುರುವಾಗಲಿದೆ. ಪ್ರಾರ್ಥನೆ, ಬಳಿಕ ಮುಖ್ಯ ಅತಿಥಿಗಳ ಭಾಷಣ, ಪದವಿ ಪ್ರದಾನ ನಡೆಯಲಿವೆ. ನಂತರ ವಿಶ್ವವಿದ್ಯಾಲಯದ ಪ್ರಮುಖರಿಂದ ಅಭಿನಂದನಾ ಸಂದೇಶ ಇರಲಿದೆ. 34ನೇ ಘಟಿಕೋತ್ಸವವು ಶೈಕ್ಷಣಿಕ ಸಾಧನೆ ಮಾತ್ರವಲ್ಲದೆ, ಹೊಣೆಯರಿತ ನಾಗರೀಕತೆ ಮತ್ತು ಸಮಾಜಮುಖಿ ಧೋರಣೆಯ ಕುರಿತ ಮಾಹೆಯ ಬದ್ಧತೆಯನ್ನು ಎತ್ತಿಹಿಡಿಯಲಿದೆ.
ಒಟ್ಟು ಆರು ದಿನಗಳ ಕಾಲ ಮಣಿಪಾಲ ಮತ್ತು ಬೆಂಗಳೂರಿನ ಕ್ಯಾಂಪಸ್ಗಳಲ್ಲಿ ನಡೆಯುವ ಪದವಿ ಪ್ರದಾನ ಸಮಾರಂಭದಲ್ಲಿ 10,277 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇವರಲ್ಲಿ 7,851 ವಿದ್ಯಾರ್ಥಿಗಳು ಖುದ್ದಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, 2,426 ವಿದ್ಯಾರ್ಥಿಗಳಿಗೆ ಗೈರುಹಾಜರಿಯಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. ಭಾಗವಹಿಸುವವರಲ್ಲಿ 10,013 ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 264 ಪಿಎಚ್ಡಿ ಸಂಶೋಧನಾರ್ಥಿಗಳು ಸೇರಿದ್ದಾರೆ.
ಮಣಿಪಾಲ ಕ್ಯಾಂಪಸ್ನಲ್ಲಿ ಮೊದಲ ದಿನ 1,401, ಎರಡನೇ ದಿನ 1,460, ಮೂರನೇ ದಿನ 1,508 ಹಾಗೂ ನಾಲ್ಕನೇ ದಿನ 1,484 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕ್ಯಾಂಪಸ್ನಲ್ಲಿ ಐದನೇ ದಿನ 1,079 ಹಾಗೂ ಆರನೇ ದಿನ 919 ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಂಎಎಚ್ಇಯ ಆರೋಗ್ಯ ವಿಜ್ಞಾನ ವಿಭಾಗದ ಪ್ರೊ ವೈಸ್ ಚಾನ್ಸಲರ್ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ವಿ.ಎಸ್.ಎಂ. (ನಿವೃತ್ತ); ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ; ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಡಾ. ಆನಂದ್ ವೇಣುಗೋಪಾಲ್; ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ. ಸಂದೀಪ್ ಶೆಣೈ; ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಭರತ್ ಕುಮಾರ್ ಸೇರಿದಂತೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್ಇ)ಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಭರತ್ ಕುಮಾರ್ ಅವರು ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.