ಉಡುಪಿ, ನ.18 (DaijiworldNews/AK): ನಗರದ ಹಳೆ ತಾಲೂಕು ಕಚೇರಿ ಬಳಿ ಇರುವ ಹಳೆ ಕಾರಾಗೃಹದಲ್ಲಿ ಮಂಗಳವಾರ ಅಪರಿಚಿತ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿದೆ.

ಈ ವ್ಯಕ್ತಿ ಸುಮಾರು 10 ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಅವರು ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಎಂಬ ಅನುಮಾನವೂ ಇದೆ.ಆದರೆ ಅವರ ಹೆಸರು ಮತ್ತು ವಿಳಾಸ ಇನ್ನೂ ತಿಳಿದುಬಂದಿಲ್ಲ. ಮೃತರ ಕುಟುಂಬ ಸದಸ್ಯರು ಅಥವಾ ಸಂಬಂಧಿಕರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿರುವ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಕೋರಲಾಗಿದೆ.
ಶವದಿಂದ ತೀವ್ರ ದುರ್ವಾಸನೆ ಬರುತ್ತಿದ್ದಂತೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಅದನ್ನು ಸ್ಥಳದಿಂದ ತೆಗೆದು ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಹಾಯ ಮಾಡಿದರು.
ಉಡುಪಿ ನಗರ ಪೊಲೀಸ್ ಠಾಣೆ ಎಸ್ಐ ರತ್ನಾಕರ್, ಪೊಲೀಸ್ ಸಿಬ್ಬಂದಿ ಆನಂದ್ ಗಾಣಿಗ, ಎಲ್ಲಲಿಂಗ ಮತ್ತು ಪ್ರಸನ್ನ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮಹಜರು ಪ್ರಕ್ರಿಯೆ ನಡೆಸಿದರು.