ಮಂಗಳೂರು, ನ.18 (DaijiworldNews/AA): ಚಳ್ಳಕೆರೆಯ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು 'ಕೋಲ್ಡ್ ಪ್ರೆಸ್ಡ್' ಎಂದು ಸುಳ್ಳು ಲೇಬಲ್ ಹಾಕಿ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ 'ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್' ಆಹಾರೋತ್ಪನ್ನ ಘಟಕದಿಂದ ಬೆಳಕಿಗೆ ಬಂದಿದ್ದು, 1,240 ಕೆ.ಜಿ. ಎಣ್ಣೆಯನ್ನು ಜಪ್ತಿ ಮಾಡಲಾಗಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಿಬ್ಬಂದಿ ದಾಳಿ ಮಾಡಿದಾಗ ಘಟಕದಲ್ಲಿನ ಲೇಬಲಿಂಗ್ ಹಾಗೂ ಬ್ರ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಬೆಳಕಿಗೆ ಬಂದಿವೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು ತರಿಸಿ, ಅದನ್ನು 'ಕೋಲ್ಡ್ ಪ್ರೆಸ್ಡ್ ಕಡಲೆಕಾಯಿ ಎಣ್ಣೆ' ಎಂದು ರೀಪ್ಯಾಕ್ ಮಾಡಿ ಗ್ರಾಹಕರಿಗೆ ವಂಚಿಸಲಾಗುತ್ತಿತ್ತು. ಈ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರತಿ ಬಾಕ್ಸ್ಗೆ 10 ಕೆ.ಜಿ.ಯಂತೆ ಒಟ್ಟು 11 ಕಡಲೆಕಾಯಿ ಎಣ್ಣೆ ಬಾಕ್ಸ್ಗಳು, ಪ್ರತಿ ಕ್ಯಾನ್ಗೆ 35 ಲೀಟರ್ನಂತೆ ಒಟ್ಟು 30 ಕಡಲೆಕಾಯಿ ಎಣ್ಣೆ ಕ್ಯಾನ್ಗಳು, ಪ್ರತಿ ಬಾಕ್ಸ್ಗೆ 20 ಕೆ.ಜಿ.ಯಂತೆ ಒಟ್ಟು 4 ತೆಂಗಿನ ಎಣ್ಣೆ ಬಾಕ್ಸ್ಗಳು ಸೇರಿದಂತೆ ಬೋಲಾಸ್ ಆಗ್ರೋ ಘಟಕದಿಂದ ಒಟ್ಟು 1,240 ಕೆ.ಜಿ. ತೂಕದ ಅಡುಗೆ ಎಣ್ಣೆ ದಾಸ್ತಾನನ್ನು ವಶಕ್ಕೆ ಪಡೆಯಲಾಗಿದೆ.