ಪುತ್ತೂರು, ಸೆ22: ದೇಯಿಬೈದೈತಿ ಔಷಧಿ ವನವನ್ನು ಯಾರ ಮನವಿ ಇಲ್ಲದೆ, ದೈವ ಪ್ರೇರಣೆಯಿಂದ ನಿರ್ಮಿಸಲಾಗಿದೆ. ಈ ವನದ ಮಧ್ಯೆ ಇರುವ ದೇಯಿಬೈದೈತಿ ಮೂರ್ತಿ ಒಂದು ಸುಂದರ ಕಲಾಕೃತಿಯಾಗಿದ್ದು, ಜನಪದೀಯ ಶೈಲಿಯಲ್ಲಿ ಮೂಡಿಬಂದಿದೆ. ಈ ಮೂರ್ತಿಗೆ ಅವಮಾನ ಮಾಡಿರುವ ಹೇಯ ಕೃತ್ಯ ನಡೆದಿರುವುದನ್ನು ನಾನು ಖಂಡಿಸುತ್ತೇನೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಡಿಪಿನಡ್ಕದಲ್ಲಿರುವ ದೇಯಿಬೈದೈತಿ ಔಷಧಿ ವನಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು. ತಪ್ಪು ಯಾರು ಮಾಡಿದರೂ ತಪ್ಪೇ. ತಪ್ಪನ್ನು ತಪ್ಪು ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ದೇಯಿಬೈದೈತಿ ಪ್ರತಿಮೆಗೆ ಅವಮಾನ ಮಾಡಿರುವ ಪ್ರಕರಣವನ್ನು ಯಾರೂ ರಾಜಕೀಯವಾಗಿ ತೆಗೆದುಕೊಳ್ಳಬಾರದು. ಈ ಘಟನೆಯ ಹೆಸರಿನಲ್ಲಿ ಜಿಲ್ಲೆಯ ಸಾಮರಸ್ಯ ಕದಡುವಂಥ ಕೆಲಸ ಆಗಬಾರದು. ಹೀಗಾದರೆ, ಕೋಟಿ-ಚೆನ್ನಯರ ಆದರ್ಶಕ್ಕೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶಕ್ಕೆ ವಿರುದ್ಧವಾಗಿ ನಡೆದಂತಾಗುತ್ತದೆ. ಸಮಾಜದಲ್ಲಿ ಅಪನಂಬಿಕೆ ಮೂಡಿಸುವ ಕೆಲಸ ನಡೆಯದಿರಲಿ ಎಂದು ಮನವಿ ಮಾಡಿದರು.