ಉಳ್ಳಾಲ ಸೆ 30: ನಾಗೇಶ್ವರ ಸಿನಿ ಕಂಬೈನ್ಸ್ ಇವರ ಮೊದಲ ತುಳು ಚಲನಚಿತ್ರ ಅಂಬರ್ ಕ್ಯಾಟರರ್ಸ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಕಡಂದಲೆ ಸುರೇಶ್ ಎಸ್ ಭಂಡಾರಿ ತಿಳಿಸಿದ್ದಾರೆ.
ಅಸೈಗೋಳಿ ಅಭಯಾಶ್ರಮದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಇದೀಗ ಚಿತ್ರ ಸೆನ್ಸಾರ್ ಬೋರ್ಡಿನಲ್ಲಿದೆ. 1.55 ಕೋಟಿ ರೂಪಾಯಿ ವೆಚ್ಚದ ದುಬಾರಿ ತುಳು ಚಲನಚಿತ್ರ ಇದಾಗಿದ್ದು, ಹಿಂದಿ ಚಲನಚಿತ್ರದ ಶೈಲಿಯಲ್ಲಿ ಸಂಪೂರ್ಣ ಚಿತ್ರವನ್ನು ನಿರ್ಮಿಸಲಾಗಿದೆ. ತುಳು ಚಲನಚಿತ್ರದಲ್ಲಿ ಇದೊಂದು ಪ್ರಥಮ ಪ್ರಯತ್ನವಾಗಿದೆ. ತುಳು ಚಲನಚಿತ್ರಗಳಿಂದ ಭಾಷೆಯ ಮೇಲಿನ ಪ್ರೀತಿಯೂ ಹೆಚ್ಚಾಗುವುದರ ಜತೆಗೆ ಹೊಸ ಕಲಾವಿದರಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಅನ್ನುವ ಉದ್ದೇಶದೊಂದಿಗೆ ಚಿತ್ರ ನಿರ್ಮಿಸಲಾಗಿದೆ ಎಂದರು.
ಚಿತ್ರದ ನಿರ್ದೇಶಕ ಜಯಪ್ರಸಾದ್ ಬಜಾಲ್ ಮಾತನಾಡಿ, ಚಿತ್ರದಲ್ಲಿ ಕನ್ನಡದ ದಿಗ್ಗಜ ನಟರುಗಳಾದ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ಸುಮಿತ್ರಾ ಪಂಡಿತ್ ಪವನ್ ಕಲ್ಯಾಣ್ ನಟಿಸಿದ್ದು, ಅವರ ಧ್ವನಿಯನ್ನೇ ತುಳು ಭಾಷೆಯಲ್ಲಿ ಡಬ್ಬಿಂಗ್ ಕೂಡಾ ಮಾಡಲಾಗಿದೆ ಎಂದರು.
ಈ ವೇಳೆ ಚಿತ್ರದ ನಾಯಕ ನಟ ಸೌರಭ್ .ಎಸ್ ಭಂಡಾರಿ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಹರೀಶ್ ಕಟಪಾಡಿ, ಶ್ರೇಯಸ್ ಶೆಟ್ಟಿ ಉಪಸ್ಥಿತರಿದ್ದರು.