ಮಂಗಳೂರು,ಸೆ,05: ಸರಿಸುಮಾರು 62 ದಿನಗಳ ಕಾಲ ಹಾಕಲಾದ ಸೆಕ್ಷನ್ ಹಿಂದಕ್ಕೆ ಪಡೆದುಕೊಳ್ಳುವ ಮೂಲಕ ಕೋಮುಗಲಭೆಯಿಂದ ತತ್ತರಿಸಿ ಹೋಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಇದೀಗ ಮತ್ತೆ ಸೆಕ್ಷನ್ ಭೀತಿ ಎದುರಿಸುವಂತಾಗಿದೆ. ಈ ಹಿಂದೆ ಹಾಕಲಾಗಿದ್ದ ಸೆಕ್ಷನ್ ಹಿಂದಕ್ಕೆ ಪಡೆದ ಕಾರಣ ಜಿಲ್ಲೆಯ ಜನತೆ ಶಾಂತಿ, ಸೌಹಾರ್ದತೆಯಿಂದ ಹಬ್ಬ, ಉತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುವಂತಾಗಿತ್ತು.
ಇದೀಗ ಮತ್ತೆ ಜಿಲ್ಲೆಯಲ್ಲಿ ರ್ಯಾಲಿ, ಪ್ರತಿಭಟನೆ, ಜಾಥಾ ತಲೆ ಎತ್ತಿದ್ದು, ಜಿಲ್ಲೆಗೆ ಸೆಕ್ಷನ್ ಭೀತಿ ಆವರಿಸತೊಡಗಿದೆ. ಬಿಜೆಪಿ ಯುವ ಮೋರ್ಚಾದ ವತಿಯಿಂದ ಮಂಗಳೂರು ಚಲೋ ಇಂದಿನಿಂದ ಆರಂಭಗೊಂಡಿದ್ದು, ಇದಕ್ಕೆ ಈಗಾಗಲೇ ಕಾಂಗ್ರೆಸ್ ವ್ಯಾಪಕ ವಿರೋಧ ವ್ಯಕ್ತಪಡಿಸಿದೆ. ಇನ್ನೊಂದೆಡೆ ಸಚಿವ ರಮಾನಾಥ ರೈ ಸಾಮರಸ್ಯದ ನಡಿಗೆಯನ್ನು ಸೆ.೧೨ರಂದು ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಸೆಕ್ಷನ್ ಜಾರಿಯಾದರೆ ಇದಕ್ಕೂ ಅಡ್ಡಿಯಾಗುವ ಸಾಧ್ಯತೆ ಇದೆ. ಇದಲ್ಲದೆ ಮಾಜಿ ಮೇಯರ್ ಅಶ್ರಫ್ ಅವರು ಕುರಾನ್ ಅವಹೇಳನ ಪ್ರಕರಣ ಮುಂದಿಟ್ಟುಕೊಂಡು ಹೋರಾಟ ನಡೆಸಲು ಮುಂದಾಗಿದ್ದಾರೆ.