ಮಂಗಳೂರು,ಸೆ.೦೫: ಮಂಗಳೂರಿನ ಬೊಂದೆಲ್ನಲ್ಲಿ ಮಾನಸಿಕ ಅಸ್ವಸ್ಥನಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪಾವೂರಿನಲ್ಲಿರುವ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ನಾಲ್ಕು ವರ್ಷಗಳ ಹಿಂದೆ ಸೇರ್ಪಡೆಗೊಳಿಸಲಾಗಿತ್ತು. ಆದರೆ ಇವರ ವಿಳಾಸವನ್ನು ಪತ್ತೆ ಹಚ್ಚುವುದು ಸ್ನೇಹಾಲಯದ ಮುಖ್ಯಸ್ಥರಾದ ಜೋಸೆಫ್ ಕ್ರಾಸ್ತಾರವರಿಗೆ ಸವಾಲಾಗಿ ಕಾಡಿತ್ತು.
ಕೆಲವು ದಿನಗಳ ಹಿಂದೆ ಇವರು ಅನಾಥಾಲಯದಲ್ಲಿರುವವರಿಗೆ ಆಧಾರ್ ಕಾರ್ಡ್ ಮಾಡಲು ಮುಂದಾದಾಗ ಇವರಲ್ಲಿ ನಾಲ್ವರ ಆಧಾರ್ ಕಾರ್ಡ್ ಈಗಾಗಲೇ ಮಾಡಲಾಗಿದ್ದು, ಸೋಮಶೇಖರ್ ಬೆಂಗಳೂರಿನ ಮಿತ್ತೇಹಳ್ಳಿ ವ್ಯಕ್ತಿ ಎನ್ನುವ ಮಾಹಿತಿ ಕಚೇರಿಯಿಂದ ಸಿಕ್ಕಿತ್ತು. ಕೂಡಲೇ ಜೋಸೆಫ್ ಅವರು ಆಧಾರ್ ಕಾರ್ಡಿನ ವಿಳಾಸಕ್ಕೆ ಮಾಹಿತಿ ನೀಡಿದ್ದು, ಬೆಂಗಳೂರಿನಿಂದ ಮನೆ ಮಂದಿ ಆಗಮಿಸಿ ಇವರನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ. ಸ್ನೇಹಾಲಯಕ್ಕ ಬಂದ ಮನೆಮಂದಿ ಅವರನ್ನು ಕಂಡು ಹರ್ಷ ವ್ಯಕ್ತಪಡಿಸಿದ್ದಲ್ಲದೇ, ಸ್ನೇಹಾಲಯದ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದರು