ಮಂಗಳೂರು, ಮೇ 15 (DaijiworldNews/MS): ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರತೀದಿನ ಕೋವಿಡ್ ಸೊಂಕಿತರ ಹೊಸ ಪ್ರಕರಣಗಳು ಕಂಡುಬರುತ್ತಿವೆ. ಸೋಂಕು ಹರಡುವುದನ್ನು ಕಡಿವಾಣ ಹಾಕಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯು ಪರಿಣಾಮಕಾರಿಯಾಗಿ ಜಾಗೃತಿ ವಹಿಸಿ, ಅಗತ್ಯ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ , ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಸೇರಿದ ಗ್ರಾಮ ಮಟ್ಟದ ಟಾಸ್ಕ್ಪೋರ್ಸ್ ಸಮಿತಿ ಸದಸ್ಯರೊಂದಿಗೆ ಕೋವಿಡ್-19 ನಿಯಂತ್ರಣ ಕುರಿತ ಸಂವಾದ ಸಭೆಯಲ್ಲಿ ಮಾತನಾಡಿದರು. ಕೊರೋನಾ ಧೃಡಪಟ್ಟು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರ ಮನೆಗಳಿಗೆ ಆಶಾ ಕಾರ್ಯಕರ್ತರು ಪ್ರತಿದಿನ ಭೇಟಿ ನೀಡಿ ಅವರುಗಳ ಪಲ್ಸ್ ಗಳ ಬಗ್ಗೆ ಪಲ್ಸರ್ ಆಕ್ಸಿ ಮೀಟರ್ ಸಹಾಯದಿಂದ ಪರೀಕ್ಷಿಸಬೇಕು ಒಂದೊಮ್ಮೆ ಅವರುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯವೆಂದಲ್ಲಿ ಆಸ್ಪತ್ರೆಗೆ ಸೇರಿಸಬೇಕು, ಮನೆಯ ಇತರ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಇರಲು ಸಾಧ್ಯವಿಲ್ಲ ಎಂದು ಕಂಡುಬಂದಲ್ಲಿ ಕೂಡಲೇ ಅವರನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ವರ್ಗಾಯಿಸಬೇಕು ಎಂದರು .
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಾರಂಭಿಸಿ ಬಡಜನರಿಗೆ ಉದ್ಯೋಗ ಒದಗಿಸುವುದರ ಜೊತೆಗೆ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕೆಲಸವಾಗಬೇಕು ಎಂದ ಅವರು ಕೂಲಿ ಕಾರ್ಮಿಕರ ದಿನನಿತ್ಯದ ವೇತನವನ್ನು ಶೀಘ್ರದಲ್ಲಿಯೇ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ಕೋವಿಡ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಪಾಲಿಸುವುದರೊಂದಿಗೆ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರವನ್ನು ಕಾಪಾಡುವುದು ಆಗಾಗ ಕೈ ತೊಳೆಯುವುದನ್ನು ತಪ್ಪದೇ ಮಾಡುವಂತೆ ತಿಳಿಸಬೇಕು ಎಂದರು .
ಪಡಿತರ ಆಹಾರವನ್ನು ಜನರು ಪಡೆಯುವಾಗ ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸುವಂತೆ ಎಚ್ಚರವಹಿಸಬೇಕು ಎಂದ ಅವರು, ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೂ ಪಡಿತರ ತಲುಪುವಂತೆ ಕ್ರಮ ವಹಿಸಬೇಕೆಂದು ಜನಪ್ರತನಿಧಿಗಳಿಗೂ ಹಾಗೂ ಅಧಿಕಾರಿಗಳಿಗೂ ತಿಳಿಸಿದರು.ಪ್ರತಿದಿನ ನಡೆಯುವ ಟಾಸ್ಕ್ ಫೋರ್ಸ್ ಸಭೆಯಲ್ಲಿ ಕರೋನಾ ಸೋಂಕಿತರಿಗೆ ಯಾವೆಲ್ಲಾ ಸೌಲಭ್ಯಗಳನ್ನು ಕೊಡಿಸಬೇಕೆಂದು ಚರ್ಚಿಸಿ, ಅವರುಗಳಿಗೆ ಏನೆಲ್ಲಾ ಅವಶ್ಯಕತೆ ಇದೆ ಎಂದು ಗುರುತಿಸಿ ತಲುಪಿಸುವ ಕೆಲಸವಾಗಬೇಕು ಎಂದರು.
ಶಾಸಕ ಹರೀಶ್ ಪೂಂಜಾ ಮಾತನಾಡಿ ಶೀಘ್ರದಲ್ಲಿಯೇ ಪ್ರತಿ ಗ್ರಾಮ ಪಂಚಾಯಿತಿಗಳಿಗೆ 10 ಪಲ್ಸ್ ಆಕ್ಸ್ಸಿ ಮೀಟರ್ ಗಳನ್ನು ನೀಡಲಾಗುವುದು ಎಂದರು .ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್ ಮಾತನಾಡಿ ಮುಂದಿನ ವಾರದಿಂದ ಕೊರನೋ ಪೀಡಿತ ರೋಗಿಗಳಿಗೆ ಮೆಡಿಕಲ್ ಕಿಟ್ಗಳನ್ನು ವಿತರಿಸಲಾಗುವುದು ಎಂದರು.
ಸಭೆಯಲ್ಲಿ ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ,ಗ್ರಾಮ ಪಂಚಾಯಿತತ್ ಅಭಿವೃಧ್ದಿ ಅಧಿಕಾರಿಗಳು ಹಾಗೂ ಗ್ರಾ.ಪಂ. ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.