ಮಂಗಳೂರು, ಮೇ 15 (DaijiworldNews/MS): ಕರಾವಳಿಯಾದ್ಯಂತ ಮೇ.೧೪ರಿಂಂದ ತೌಕ್ತೇ ಚಂಡಮಾರುತ ಪರಿಣಾಮ ಭಾರೀ ಮಳೆ ಗಾಳಿಯಾಗುತ್ತಿದ್ದು ಜಿಲ್ಲಾಡಳಿತ ತಕ್ಷಣ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಾಕೃತಿಕ ವಿಕೋಪ ತಡೆ,ರಕ್ಷಣೆ ಹಾಗೂ ಪರಿಹಾರಗಳಿಗಾಗಿ ಜನಪ್ರತಿನಿಧಿಗಳು,ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಬೇಕೆಂದು ಶಾಸಕ ಯು.ಟಿ.ಖಾದರ್ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದರಬೇಕು,ಆಯಾ ಪ್ರದೇಶದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಸಾರ್ವಜನಿಕರಿಗೆ ನೆರವಾಗಬೇಕೆಂದು ಅವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಸೋಮೇಶ್ವರ ಕಡಲ್ಕೊರೆತ ನಿರ್ಲಕ್ಷ್ಯ ಸಲ್ಲದು:
ಸೋಮೇಶ್ವರ ಪ್ರದೇಶದಲ್ಲಿ ಕಳೆದ ವರ್ಷ ಕೂಡಾ ದೇವಸ್ಥಾನದ ಮೋಹನ್ ಮನೆಯ ಬಳಿ ವ್ಯಾಪಕವಾಗಿ ಕಡಲ್ಕೊರೆತ ಸಂಭವಿಸಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟ ಉಸ್ತುವಾರಿ ಸಚಿವರೂ ಬಂದರು ಸಚಿವರೂ ಆದ ಕೋಟ ಶ್ರೀನಿವಾಸ ಪೂಜಾರಿರವರು ಮುಂದಕ್ಕೆ ಕಡಲ್ಕೊರೆತ ತಡೆಗಟ್ಟಲು ಬೇಕಾದ ಕ್ರಮಗಳನ್ನು ಕೈಗೊಂಡು ಘಟನೆ ಪುನಾರಾವರ್ತನೆ ಆಗದಂತೆ ನೋಡಿಕೊಳ್ಳುತ್ತೇನೆಂಬ ಭರವಸೆ ನೀಡಿದ್ದರು. ನಂತರದ ದಿನಗಳಲ್ಲಿ ಸಚಿವರು ಹೇಳಿದ ಯಾವುದೇ ಕೆಲಸ ಆಗದೇ ಸೋಮೇಶ್ವರ ಉಚ್ಚಿಲ ಬೆಟ್ಟಂಪಾಡಿ ಪ್ರದೇಶದಲ್ಲಿ ಈ ಬಾರಿ ಕೂಡಾ ಹೆಚ್ಚಿನ ಆಸ್ತಿಪಾಸ್ತಿ ನಷ್ಟವಾಗುವ ಭೀತಿಯಲ್ಲಿದೆ.
ಸರಕಾರ ಇದನ್ನು ತಕ್ಷಣ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಜುಲೈ,ಆಗಸ್ಟ್ ಹೆಚ್ಚಿನ ಕಡಲ್ಕೊರೆತ ನಷ್ಟ ಸಂಭವಿಸಬಹುದು.ಆದುದರಿಂದ ಈಗಲೇ ಈ ಬಗ್ಗೆ ಎಚ್ಚೆತ್ತುಕೊಂಡು ಸರಕಾರ ಕಾರ್ಯ ನಿರ್ವಹಿಸಬೇಕಾಗಿದೆ. ಈ ಬಗ್ಗೆ ಎಡಿಬಿ ಅಧಿಕಾರಿಗಳೇ ಇದರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.ಇದಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಹಿಂದೆಯೇ ಸರಕಾರಕ್ಕೆ ಪತ್ರ ಬರೆದು ಎಡಿಬಿಯವರ ಕೆಲಸ ಸಮರ್ಪಕವಾಗಿದೆಯೆಂದು ತಜ್ಞರ ಸಮಿತಿ ವರದಿ ನೀಡುವವರೆಗೂ ಬಂದರು ಇಲಾಖೆ ಇದನ್ನು ತಮ್ಮ ಸುಪರ್ಧಿಗೆ ತೆಗೆದುಕೊಳ್ಳಬಾರದೆಂದು ಒತ್ತಾಯಿಸಿದ್ದೇನೆಂದು ಯು.ಟಿ.ಖಾದರ್ ತಿಳಿಸಿದರು.
ಈ ಬಗ್ಗೆ ಬಂದರು ಮತ್ತು ಉಸ್ತುವಾರಿ ಸಚಿವರು ತಕ್ಷಣ ಎಡಿಬಿ ಅಧಿಕಾರಿಗಳು,ಬಂದರು ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರ ಬಳಿ ಮಾತುಕತೆ ನಡೆಸಿದ್ದಾರೆಂದು ಯು.ಟಿ.ಖಾದರ್ ತಿಳಿಸಿದರು.