ಕಾಸರಗೋಡು, ಮೇ.15 (DaijiworldNews/PY): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಪರಿಣಾಮ ಕಾಸರಗೋಡು ಜಿಲ್ಲೆಯಲ್ಲಿ ಗಾಳಿ, ಮಳೆ ಅಬ್ಬರ ಉಂಟಾಗಿದ್ದು, ಕಡಲ್ಕೊರೆತದಿಂದ ಹಲವು ಮನೆಗಳು ಅಪಾಯದಲ್ಲಿದೆ.

ಉಪ್ಪಳ, ಮುಸೋಡಿ, ಕಾಸರಗೋಡು ಚೇರಂಗೈ ಮೊದಲಾದೆಡೆ ಅಬ್ಬರ ಹೆಚ್ಚಾಗಿದೆ. ಉಪ್ಪಳ, ಮುಸೋಡಿ ತೀರದಲ್ಲಿ ಎರಡು ಮನೆಗಳು ಸಮುದ್ರಪಾಲಾಗಿವೆ. ಮನೆಯವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಮುಸೋಡಿಯ ಮೂಸಾ ಎಂಬವರ ಎರಡಂತಸ್ತಿನ ಮನೆ ಇಂದು ಬೆಳಿಗ್ಗೆ ನೆಲಕಚ್ಚಿದೆ. ಇನ್ನೊಂದು ಮನೆ ಕುಸಿದಿದೆ. ಐದಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ. ಈ ಮನೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮುಸೋಡಿ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಚೇರಂಗೈ ತೀರದ ನಾಲ್ಕು ಮನೆಗಳಿಗೆ ಸಮುದ್ರ ನೀರು ನುಗ್ಗಿದ್ದು, ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.
ವೆಳ್ಳರಿಕುಂಡು ಬಳಾಲ್ನಲ್ಲಿ ಗಾಳಿಯಿಂದ ಎರಡು ಮನೆಗಳು ಭಾಗಶಃ ಕುಸಿದಿದೆ. ಚಿತ್ತಾರಿಯಲ್ಲಿ ಎರಡು ಮನೆಗಳಿಗೆ ನೆರೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಮಧ್ಯಾಹ್ನದ ವೇಳೆಗೆ ಮಳೆಯ ಅಬ್ಬರ ಕಡಿಮೆಯಾಗಿದೆ.