ಕುಂದಾಪುರ, ಮೇ 15 (DaijiworldNews/MB) : ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕಾಗಿ ಬೃಹತ್ ಬ್ರಹ್ಮರಥ ನಿರ್ಮಾಣ ಕಾರ್ಯವನ್ನು ಮೇ 14 ಶುಕ್ರವಾರ ಆರಂಭ ಮಾಡಲಾಗಿದೆ.

ಹಿರಿಯ ರಥ ಕುಶಲಕರ್ಮಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯರು ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಈ ರಥವು ಭಗವಂತ ಶ್ರೀರಾಮನಿಗಾಗಿ ನಿರ್ಮಿಸಲಾಗುವ ವಿಶ್ವದ ಅತಿ ಎತ್ತರದ ಮತ್ತು ದೊಡ್ಡದಾದ ರಥವಾಗಲಿದೆ ಎಂದು ಹೇಳಲಾಗಿದೆ.
ಮೊದಲೇ ನಿರ್ಧರಿಸಿದಂತೆ, ರಥದ ನಿರ್ಮಾಣದ ಕಾರ್ಯವು ಅಕ್ಷಯ ತೃತೀಯದ ಶುಭ ದಿನದಂದು ಪ್ರಾರಂಭವಾಗಿದೆ. ರಥದ ಕೆಲಸ ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಕಿಶ್ಕಿಂದದ ಹನುಮಾ ಜನ್ಮಭೂಮಿ ಕ್ಷೇತ್ರದ ಪರವಾಗಿ ಈ ರಥವನ್ನು ಶ್ರೀ ರಾಮ ಮಂದಿರಕ್ಕೆ ಅರ್ಪಣೆ ಮಾಡಲಾಗುತ್ತಿದೆ.
ರಥವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ರಥ ಕುಶಲಕರ್ಮಿ ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ಮೀನಾರಾಯಣ ಆಚಾರ್ಯರು ನಿರ್ಮಿಸಲಿದ್ದಾರೆ. ರಥದ ನಿರ್ಮಾಣಕ್ಕೆ ಅನುಕೂಲವಾಗುವಂತೆ ಕುಂಭಾಶಿಯಲ್ಲಿ ಬೃಹತ್ ಶೆಡ್ ನಿರ್ಮಿಸಲಾಗುತ್ತಿದೆ. ಈ ರಥವನ್ನು ಕುಕ್ಕೇ ಶ್ರೀ ಸುಬ್ರಮಣ್ಯ ದೇವಸ್ಥಾನ ರಥ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ಇದು ವಿಶ್ವದ ಅತಿ ಎತ್ತರದ ರಥವಾಗಲಿದೆ.
ಈ ರಥದ ಚಕ್ರವು 10 ಅಡಿ ಎತ್ತರದ್ದಾಗಿದ್ದು, 20 ಅಡಿ ಜಿಡ್ಡೆ, ಪೀಠವು ಎಂಟು ಅಡಿಗಳು, ಧ್ವಜ ಪ್ರದೇಶವು 36 ಅಡಿಗಳು, ಮಂಟಪ ಭಾಗವು ಐದು ಅಡಿ ಮತ್ತು ಕಳಶ ಭಾಗವು ಸೇರಿದಂತೆ 84 ಅಡಿಗಳು ಇರಲಿದೆ. ಕಳಶ ಭಾಗವು ಐದು ಅಡಿ ಇರಲಿದೆ. ರಥದ ಅಗಲ 26 ಅಡಿ ಇರಲಿದೆ. ಉತ್ತರಾಖಂಡದಿಂದ ತರಲಾಗುವ ಮರಗಳನ್ನು ರಥಕ್ಕೆ ಬಳಸಿದರೆ, ಕರಾವಳಿಯ ಬೋಗಿ ಮರವನ್ನು ಚಕ್ರ ನಿರ್ಮಾಣಕ್ಕೆ ಬಳಸಲಾಗುತ್ತದೆ.
ರಥವನ್ನು ನಿರ್ಮಿಸಲು ಒಟ್ಟು 60 ಟನ್ ಮರದ ಅಗತ್ಯವಿದೆ. ರಥದ ತೂಕ 50 ಟನ್ ಇರಲಿದೆ. ರಥದ ಸುತ್ತಲೂ ಭಗವಾನ್ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ವಿಶಿಷ್ಟ ಕಲಾಕೃತಿಗಳನ್ನು ಹೊಂದಿರುತ್ತದೆ. ರಥದ ಬೆಲೆ ನಾಲ್ಕು ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಮಹಾಗಜ ರಥವನ್ನು ನಿರ್ಮಿಸಲು ಶಿಲ್ಪಿಗಳಲ್ಲದೆ, 50 ಜನರು ಕೂಡಾ ಕಾರ್ಯ ನಿರ್ವಹಿಸಲಿದ್ದಾರೆ.
ಕುಂಭಾಶಿಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಶೆಡ್ ನಿರ್ಮಾಣ ಕಾರ್ಯವು ಚುರುಕಾಗಿ ನಡೆಯುತ್ತಿದೆ. ರಥ ನಿರ್ಮಾಣದ ಹಿನ್ನೆಲೆಯಲ್ಲಿ ಪೂಜೆ ನಡೆಸಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ರಥಕುಶಲಕರ್ಮಿ ರಾಜಗೋಪಾಲಚಾರ್ಯ, ''ರಥ ನಿರ್ಮಾಣ ಕಾರ್ಯವು ಕಠಿಣವಾದ ಕೆಲಸ. ನಾವು ಈ ರಥವನ್ನು ಭಕ್ತಿಯಿಂದ ನಿರ್ಮಾಣ ಮಾಡುತ್ತೇವೆ. ಅಯೋಧ್ಯೆಯಲ್ಲಿ ಮೂರು ಪಡುಕಗಳ ಪೂಜೆ ಮಾಡಲಾಗಿದ್ದು ಈ ಪೈಕಿ ಒಂದನ್ನು ಕಿಷ್ಕಿಂದಕ್ಕೆ ಒಂದು ಇಲ್ಲಿಗೆ ನೀಡಲಾಗಿದೆ. ರಾಮನು ನಮ್ಮೊಂದಿಗಿದ್ದಾನೆ ಎಂಬ ಮನೋಭಾವದಿಂದ ನಾವು ರಥವನ್ನು ನಿರ್ಮಿಸುತ್ತೇವೆ, ನಾವು ಈ ಶೆಡ್ಗೆ ಅಯೋಧ್ಯೆ ಎಂದು ಹೆಸರಿಟ್ಟಿದ್ದೇವೆ'' ಎಂದು ತಿಳಿಸಿದ್ದಾರೆ.
ಅಯೋಧ್ಯೆ ಉಡುಪಿಯಿಂದ ಸುಮಾರು 2,000 ಕಿ.ಮೀ ದೂರದಲ್ಲಿದ್ದು ಟೋಲ್ಗೇಟ್ಗಳು, ವಿದ್ಯುತ್ ಕೇಬಲ್ಗಳು, ಸಂಚಾರದಟ್ಟಣೆಗಳು ಇರುತ್ತದೆ. ಈ ಹಿನ್ನೆಲೆ ರಥ ಸಾಗಾಣೆ ಕಷ್ಟಕರವಾಗಲಿದೆ. ಈ ಹಿನ್ನೆಲೆ ರಥದ ಭಾಗಗಳನ್ನು ಅಯೋಧ್ಯೆಗೆ ಸಾಗಿಸಿ ಅಲ್ಲಿ ಜೋಡಿಸಲಾಗುತ್ತದೆ.
ಇನ್ನು ಈ ಬಗ್ಗೆ ಮಾತನಾಡಿದ ರಾಷ್ಟ್ರೀಯ ಪ್ರಶಸ್ತಿ ವಿಜೇತ ರಥ ಕುಶಲಕರ್ಮಿ ಲಕ್ಷ್ಮೀನಾರಾಯಣ ಆಚಾರ್ಯರು, ''ನಮ್ಮ ಪೂರ್ವಜರು ಮಾಡಿದ ಸತ್ಕಾರ್ಯಗಳಿಂದಾಗಿ ಅಯೋಧ್ಯೆಯ ಭಗವಾನ್ ರಾಮನ ರಥವನ್ನು ನಿರ್ಮಿಸುವ ಅವಕಾಶ ದೊರೆತಿದೆ. ಈ ರಥವು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕಾಗಿ ನಿರ್ಮಿಸಲಾದ ರಥದಂತೆ ಇರಲಿದೆ. ರಥವನ್ನು ನಿರ್ಮಿಸಲು ನಮಗೆ ಎರಡೂವರೆ ವರ್ಷಗಳ ಸಮಯವನ್ನು ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ತಗುಲುವ ಸಮಯಕ್ಕೆ ಇದು ಸರಿಸಮವಾಗಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ'''ಎಂದು ತಿಳಿಸಿದ್ದಾರೆ.