ಉಡುಪಿ, ಮೇ 15 (DaijiworldNews/MB) : ಕರಾವಳಿಯಲ್ಲಿ ತೌಖ್ತೆ ಚಂಡಮಾರುತ ಅಬ್ಬರ ಮುಂದುವರೆದಿದ್ದು ಹಿಂದೆಂದೂ ಕಂಡಿರದಷ್ಟು ಅಲೆಗಳ ಆರ್ಭಟ ಕಂಡು ಬಂದಿದೆ. ಮಲ್ಪೆಯಲ್ಲಿ 60ಕ್ಕೂ ಅಧಿಕ ಮೀನುಗಾರ ಕುಟುಂಬಗಳು ಅಪಾಯದಲ್ಲಿದ್ದು ಮಲ್ಪೆ-ಪಡುಕೆರೆ ನಿವಾಸಿಗಳ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಆ ಪ್ರದೇಶದವರ ಮನವೊಲಿಸುವ ಕಾರ್ಯವೂ ನಡೆಸಲಾಗುತ್ತಿದೆ.







ಪಡುಕೆರೆ ಮೀನುಗಾರಿಕಾ ರಸ್ತೆಗಳನ್ನು ದಾಟಿ ಸಮುದ್ರದ ಅಲೆಗಳು ಮುನ್ನುಗ್ಗುತ್ತಿದೆ. ಈ ತೌಖ್ತೆ ಚಂಡಮಾರುತ ಅಬ್ಬರದಿಂದಾಗಿ ಕಡಲ ತೀರದ ನಿವಾಸಿಗಳು ಅಪಾಯದಲ್ಲಿದ್ದು ಈ ಹಿನ್ನೆಲೆ ಪಡುಕೆರೆ ಮೀನುಗಾರರ ನಿವಾಸಗಳಿಗೆ ಶಾಸಕ ರಘುಪತಿ ಭಟ್ ಭೇಟಿ ನೀಡಿ ತೀರದ ನಿವಾಸಿಗಳ ಸ್ಥಳಾಂತರಕ್ಕೆ ಮನವೊಲಿಕೆ ಮಾಡುವ ಯತ್ನ ಮಾಡಿದ್ದಾರೆ.
ಸಂಜೆಯ ನಂತರ ಮತ್ತೆ ನೀರಿನ ಅಬ್ಬರ ಇರುವ ಸಾಧ್ಯತೆ ಹಿನ್ನೆಲೆ ಅದಕ್ಕೂ ಮುನ್ನ ಮಲ್ಪೆ-ಪಡುಕೆರೆ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಚಿಂತನೆ ನಡೆಸಲಾಗಿದೆ. ಮಲ್ಪೆಯ ಏಳೂರು ಮೊಗವೀರ ಭವನದಲ್ಲಿ ಕಾಳಜಿ ಕೇಂದ್ರ ಆರಂಭ ಮಾಡಲು ಕೂಡಾ ನಿರ್ಧರಿಸಲಾಗಿದೆ.
ಇನ್ನು ಜಿಲ್ಲೆಯಾದ್ಯಂತ ಮಳೆ ಇನ್ನಷ್ಟು ತೀವ್ರವಾಗಿದ್ದು, ನಾಳೆ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರಿಕೆ ಮಾಡಲಾಗಿದೆ. ಇನ್ನು ಮರವಂತೆ, ಉಪ್ಪುಂದದಲ್ಲಿ ಕಡಲ್ಕೊರೆತ ಅಧಿಕವಾಗಿದ್ದು, ಸಮುದ್ರದ ಅಲೆಗಳು ತೆಂಗಿನ ಮರಗಳನ್ನು ಉರುಳಿಸಿದೆ.
ಸ್ಥಳೀಯರು ಮೀನುಗಾರಿಕಾ ಶೆಡ್ಗಳ ಸ್ಥಳಾಂತರ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಲೆ, ಟಬ್, ಹಗ್ಗ, ಐಸ್ ಬಾಕ್ಸ್ಗಳನ್ನು ಕೂಡಾ ಸ್ಥಳಾಂತರ ಮಾಡಿದ್ದಾರೆ. ಇನ್ನು ಪಡುಕೆರೆಯಲ್ಲೂ ಕಡಲ್ಕೊರೆತ ತೀವ್ರಗೊಂಡಿದೆ. ಕಡಲಿನ ತೆರೆಗಳು ತಡೆಗೋಡೆಗೆ ಅಪ್ಪಳಿಸುತ್ತಿದೆ. ತ್ರಾಸಿ, ಮಡಿಕಲ್ ಸಮೀಪದಲ್ಲೂ ಜನರ ಸ್ಥಳಾಂತರ ಮಾಡಲಾಗುತ್ತಿದೆ.
ಮಲ್ಪೆಯಲ್ಲಿ 60ಕ್ಕೂ ಅಧಿಕ ಮೀನುಗಾರ ಕುಟುಂಬಗಳು ಅಪಾಯದಲ್ಲಿದ್ದು ಕಡಲಿನ ಅಲೆಗಳು ಮೀನುಗಾರಿಕಾ ರಸ್ತೆಯನ್ನು ದಾಟಿ ಮೇಲೆ ಬರುತ್ತಿದೆ. ಮಲ್ಪೆಯ ಮುಖ್ಯ ಬೀಚ್ಗೆ ಭಾರಿ ಗಾತ್ರದ ಅಲೆಗಳಿಂದ ಹಾನಿ ಉಂಟಾಗಿದೆ. ಮೀನುಗಾರಿಕಾ ಬೋಟ್ಗಳನ್ನು ಮೀನುಗಾರರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಇನ್ನು ಕಡಲ್ಕೊರೆತ ತಡೆಯಲು ಹಾಕಿದ ಕಲ್ಲುಗಳು ಕೂಡ ಸಮುದ್ರಪಾಲಾಗಿದೆ. ಗಾಳಿ-ಮಳೆ ಇದೇ ರೀತಿ ಮುಂದುವರಿದರೆ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಮಲ್ಪೆಯಲ್ಲಿ ಎಂಟಕ್ಕೂ ಅಧಿಕ ಬೋಟುಗಳಿಗೆ ಚಂಡಮಾರುತದಿಂದ ಹಾನಿಗೆ ಒಳಗಾಗಿದೆ.