ಕೊಲ್ಲೂರು,ಸೆ.05: ಅಂಪಾರು-ಕೊಲ್ಲೂರು ಹೆದ್ದಾರಿಯ ಸಮೀಪ ಎರಡು ಕಾಡುಕೋಣಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಂಪಾರು-ಕೊಲ್ಲೂರು ಮುಖ್ಯ ಹೆದ್ದಾರಿಯಲ್ಲಿ ಸದಾ ವಾಹನ ಸಂಚಾರ ಇರುತ್ತದೆ. ಆದರೂ ಹೆದ್ದಾರಿ ಹತ್ತಿರದ ಖಾಸಗಿ ಸ್ಥಳದಲ್ಲಿ ಈ ಹತ್ಯೆ ನಡೆಸಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ದುಷ್ಕರ್ಮಿಗಳು ಮಾಂಸಕ್ಕಾಗಿ ಈ ಹತ್ಯೆ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಬೈಕ್ ಅಥವಾ ಪಿಕಪ್ ವಾಹನದಲ್ಲಿ ಬಂದ 8-10 ಮಂದಿ ದುಷ್ಕರ್ಮಿಗಳು ರಾತ್ರಿ ವೇಳೆ ಮೇಯುತ್ತಿದ್ದ ಕಾಡುಕೋಣಗಳಿಗೆ ಬಂದೂಕಿನಿಂದ ಶೂಟ್ ಮಾಡಿದ್ದಾರೆ. ಆದರೆ ಆ ಸಮಯದಲ್ಲಿ ಬೇರೆ ವಾಹನಗಳು ಆ ರಸ್ತೆಯಲ್ಲಿ ಬಂದಿರಬಹುದು ಅಥವಾ ಸತ್ತ ಕಾಡುಕೋಣಗಳನ್ನು ಸಾಗಿಸಲು ಆಗದೇ ಇರುವುದರಿಂದ ಅಲ್ಲಿಯೇ ಬಿಟ್ಟು ಫಲಾಯನ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಅಂಪಾರು ಹಾಗೂ ನೇರಳಕಟ್ಟೆ ಮಾರ್ಗ ನಡುವಿನ ಸಿಸಿ ಕ್ಯಾಮರಗಳ ಪುಟೆಜ್ನ್ನು ಸಂಗ್ರಹಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.