ಬೆಂಗಳೂರು,ಸೆ.6: ಹಿರಿಯ ಪತ್ರಕರ್ತೆ, ಖ್ಯಾತ ಸಾಹಿತಿ, ಮನೋಜ್ಞ ವಿಚಾರವಾದಿ ಗೌರಿ ಲಂಕೇಶ್ ಇನ್ನು ನೆನಪು ಮಾತ್ರ. ಖ್ಯಾತ ಸಾಹಿತಿ ಪಿ ಲಂಕೇಶ್ ಅವರ ನಿರ್ಗಮನದ ನಂತರ ಜನಪ್ರಿಯ ಲಂಕೇಶ್ ಪತ್ರಿಕೆಯನ್ನು ಮುಂದುವರಿಸಿ ಪತ್ರಿಕೋದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದ ಗೌರಿ ಲಂಕೇಶ್ ಹತ್ಯೆ ಇವತ್ತು ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಗೌರಿ ಲಂಕೇಶ್ ಅವರನ್ನು ಮಂಗಳವಾರ ರಾತ್ರಿ ಇಳಿ ಸಂಜೆಯ ವೇಳೆಗೆ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ರಾಜರಾಜೇಶ್ವರಿ ನಗರದ ಅವರ ಮನೆ ಬಳಿಯೇ ದುಷ್ಕರ್ವಿುಗಳು ಈ ಕೃತ್ಯವೆಸಗಿದ್ದಾರೆ. ಬೈಕ್ನಲ್ಲಿ ಬಂದಿದ್ದ ಮೂವರು ದುಷ್ಕರ್ವಿುಗಳಿಂದ ಕೃತ್ಯ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕತ್ತಲಲ್ಲಿ ಹಂತಕರು ಹಾರಿಸಿದ ಗುಂಡುಗಳು ಗೌರಿ ಲಂಕೇಶ್ ಅವರ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಹೊಕ್ಕಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಮೇಲೆ 2015 ರಲ್ಲಿ ಗುಂಡಿನ ದಾಳಿ ನಡೆದ ಮಾದರಿಯಲ್ಲಿ ಇದೀಗ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಸೇರಿಕೊಂಡು ಹತ್ಯೆ ಮಾಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ನಿಜಕ್ಕೂ ಖಂಡನೀಯ. ಇವರು ಸಮಾಜ ಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದರು. ಹೀಗಾಗಿ ಅನೇಕ ಬೆದರಿಕೆಗಳು ಕೂಡ ಇವರಿಗಿತ್ತು. ಆದರೆ ಗೌರಿ ಲಂಕೇಶ್ ಬೆದರಿಕೆ ಬಗ್ಗೆ ಹೇಳಿಕೊಂಡಿರಲಿಲ್ಲ. ಸೈದ್ಧಾಂತಿಕ ವಿಚಾರದಲ್ಲಿನ ಭಿನ್ನಾಭಿಪ್ರಾಯದಿಂದ ಈ ಹತ್ಯೆ ನಡೆದಿರಬಹುದು ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ. ಆದರೆ ನಿಖರ ವಿಷಯ ತನಿಖೆ ನಂತರ ತಿಳಿದು ಬರಲಿದೆ.