ಮಂಗಳೂರು, ಅ 14: ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್ಗಳಿಂದ ನಿಯಮ ಉಲ್ಲಂಘನೆಯಾಗುತ್ತಿದೆ ಎನ್ನುವ ಸಾರ್ವಜನಿಕರ ದೂರುಗಳು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ವ್ಯಕ್ತವಾದವು.
ಪ್ರಯಾಣಿಕರನ್ನು ಅರ್ಧದಲ್ಲಿ ಇಳಿಸುವ ಮತ್ತು ನಿಗದಿತ ಮಾರ್ಗವನ್ನು ಬದಲಾಯಿಸಿ ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದು, ಇಂತಹ ಬಸ್ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಅವರನ್ನು ಒತ್ತಾಯಿಸಿದರು.
ಕೊಣಾಜೆ ಕಡೆಯಿಂದ ಮಂಗಳೂರಿಗೆ ಬರುವ ಕೆಲವು ಬಸ್ಸುಗಳಲ್ಲಿ ಮಂಗಳೂರು ಎಂದು ಬೋರ್ಡ್ ಹಾಕಿಸಿ, ಪ್ರಯಾಣಿಕರನ್ನು ತುಂಬಿಸಿಕೊಂಡು ಬರುತ್ತಾರೆ. ಆದರೆ ಬಸ್ ಮಂಗಳೂರು ತಲುಪುವ ಮೊದಲೇ ಪ್ರಯಾಣಿಕರನ್ನು ಪಂಪ್ ವೆಲ್ ನಲ್ಲಿ ಇಳಿಸಿ ಇನ್ನೊಂದು ಬಸ್ಸಿಗೆ ಹತ್ತಿಸಿ ಕಳುಹಿಸುತ್ತಾರೆ. ಕೊಣಾಜೆಯಿಂದ ಬರುವ ಬಸ್ಸುಗಳಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಬಸ್ ಅರ್ಧದಲ್ಲಿ ನಿಲ್ಲಿಸಿ ಬೇರೆ ಬಸ್ಸಿಗೆ ಹತ್ತಿಸುವುದರಿಂದ ಕಷ್ಟವಾಗುತ್ತದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿಬಂದವು.
ಫೋನ್ ಕರೆಗಳನ್ನು ಸ್ವೀಕರಿಸಿದ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಅವರು ಸಾರ್ವಜನಿಕರ ದೂರುಗಳ ಬಗ್ಗೆ ಕೂಡಲೇ ಗಮನಹರಿಸುವಂತೆ ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ದಕ್ಷಿಣ ಕನ್ನಡ ಬಸ್ ಮಾಳೀಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪಾಡಿ ಅವರಿಗೆ ಸೂಚಿಸಿದರು.