ಕಾಸರಗೋಡು, ಅ 14 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾ೦ತರ ರೂಪಾಯಿ ಬೆಲೆ ಬಾಳುವ ಜಿಂಕೆ ಕೋಡು ಮತ್ತು ಆಮೆಗಳನ್ನು ಕಾಸರಗೋಡು ಅರಣ್ಯ ಇಲಾಖಾ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕುಂಬಳೆ ಮೊಗ್ರಾಲ್ ಮುಹಮ್ಮದ್ ಅಬ್ದುಲ್ಲಾ ಮೊಯ್ದಿನ್ (46), ಮೊಗ್ರಾಲ್ ಪುತ್ತೂರಿನ ವಿ. ಇಮಾಂ ಅಲಿ (49), ಮೊಗ್ರಾಲ್ ಕೊಪ್ರ ಬಜಾರ್ ನ ಬಿ.ಎಂ ಕಾಸಿಂ (40), ಮಾಯಿಪ್ಪಾಡಿಯ ಕರೀಂ (40) ಎಂದು ಗುರುತಿಸಲಾಗಿದೆ.
ಕುಂಬಳೆ ಪೇರಾಲ್ ಕಣ್ಣೂರಿನಿಂದ ಎರಡು ಆಲ್ಟೋ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಕಾರನ್ನು ತಪಾಸಣೆ ನಡೆಸಿದಾಗ ಮೂರು ಜಿಂಕೆ ಕೋಡು, 11 ರಷ್ಟು ವಿಶಿಷ್ಟ ತಳಿಯ ಆಮೆಗಳು ಪತ್ತೆಯಾಗಿದ್ದವು.
ಈ ನಾಲ್ವರು ಮುಂಬೈಯ ತಂಡವೊಂದಕ್ಕೆ ಜಿಂಕೆ ಕೋಡು ಮತ್ತು ಆಮೆಯನ್ನು ಹಸ್ತಾತರಿಸಲು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದರು ಎಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಸಾಗಾಟ ತಂಡದ ಬಗ್ಗೆ ಕೆಲ ದಿನಗಳ ಹಿಂದೆಯೇ ಅರಣ್ಯಾಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ನಿಗಾ ಇರಿಸಿದ್ದು, ತಂಡದ ಬಗ್ಗೆ ಲಭಿಸಿದ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ನಾಲ್ವರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಭಾರತ ಹಾಗೂ ಇತರ ಕಡೆಗಳಲ್ಲಿ ಪೂಜೆಗಾಗಿ ಜಿಂಕೆ ಕೋಡು ಮತ್ತು ಆಮೆಗಳನ್ನು ಬಳಸುತ್ತಿದ್ದು, ಅಮೇರಿಕಾ ಹಾಗೂ ಇತರ ದೇಶಗಳಲ್ಲೂ ಜಿಂಕೆ ಕೋಡು ಮತ್ತು ಆಮೆಗಳಿಗೆ ಬಾರಿ ಬೇಡಿಕೆ ಇದೆ. ಈ ಹಿನ್ನಲೆಯಲ್ಲಿ ವಿದೇಶಕ್ಕೆ ಅಕ್ರಮ ಸಾಗಾಟ ಮಾಡಲು ಮುಂಬೈ ತಂಡಕ್ಕೆ ಇದನ್ನು ಹಸ್ತಾಂತರಿಸಲು ತಂಡವು ತೆರಳುತ್ತಿದ್ದರು. ವಿದೇಶದಲ್ಲಿ ಇದು ಕೋಟ್ಯಾ೦ತರ ರೂಪಾಯಿ ಬೆಲೆ ಹೊಂದಿದೆ ಎಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಹೆಚ್ಚಿನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಸಾಗಾಟದ ಹಿಂದೆ ಬೃಹತ್ ಜಾಲದ ಕೈವಾಡವಿದ್ದು, ಈ ಜಾಲದ ಪತ್ತೆಗೆ ತಂಡವು ತನಿಖೆ ನಡೆಸುತ್ತಿದೆ.