ಮಂಗಳೂರು,ಸೆ.06: ಬಿಜೆಪಿ ಯುವ ಮೋರ್ಚಾದ ವತಿಯಿಂದ ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಯುವಮೋರ್ಚಾ ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳೂರಿಗೆ ಆಗಮಿಸಿದ್ದಾರೆ. ನಾಳೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಬೈಕ್ ರ್ಯಾಲಿಗೆ ಇನ್ನೂ ಅನುಮತಿಯನ್ನು ಪೊಲೀಸರು ನೀಡಿಲ್ಲ.
ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ವೈ ಯಾವುದೇ ಕಾರಣಕ್ಕೂ ನಾಳೆ ನಡೆಯುವ ಕಾರ್ಯಕ್ರಮ ನಿಲ್ಲುವುದಿಲ್ಲ. ಸುಮಾರು 7 ರಿಂದ 8 ಸಾವಿರ ಮಂದಿ ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ರಾಜ್ಯ ಸರಕಾರ ಬೈಕ್ ರ್ಯಾಲಿಗೆ ತಡೆಯೊಡ್ಡಿರುವುದರಿಂದ ಬಿಜೆಪಿ ಕಾರ್ಯಕರ್ತರಿಗೆ ಇನ್ನಷ್ಟು ಹುಮ್ಮಸ್ಸು ಹೆಚ್ಚಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದವರು ಹೇಳಿದ್ದಾರೆ.
ಮಾತ್ರವಲ್ಲದೆ ಕರ್ನಾಟಕದಲ್ಲಿ ಇದುವರೆಗೆ ಒಟ್ಟು 24 ಕಾರ್ಯಕರ್ತರ ಹತ್ಯೆ ನಡೆದಿದೆ. ದ.ಕ ಜಿಲ್ಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರ ಹತ್ಯೆಗೆ ಸಚಿವ ರಮಾನಾಥ್ ರೈ ಯವರೆ ಕಾರಣ, ಸಚಿವರ ನಿರ್ಲಕ್ಷದಿಂದಾಗಿ ಈ ಹತ್ಯೆಗಳಾಗಿವೆ ಎಂದವರು ದೂರಿದರು.
ಸಿದ್ದರಾಮಯ್ಯನವರ ಸರಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ ಎಂಬುದು ಗೌರಿ ಲಂಕೇಶ್ ಅವರ ಹತ್ಯೆಯಿಂದ ತಿಳಿಯುತ್ತದೆ. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದವರು ಹೇಳಿದರು.