ನವದೆಹಲಿ, ಸೆ.೭: ಹಿರಿಯ ಪತ್ರಕರ್ತೆ, ಖ್ಯಾತ ಸಾಹಿತಿ, ವಿಚಾರವಾದಿ ಗೌರಿ ಲಂಕೇಶ್ ದುಷ್ಕರ್ಮಿಗಳ ಗುಂಡಿನೇಟಿಗೆ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಹತ್ಯೆಯಾಗಿದ್ದರು. ಅವರ ಹತ್ಯೆಯನ್ನು ಇದೀಗ ಅಮೆರಿಕ ರಾಯಭಾರ ಕಚೇರಿ ಖಂಡಿಸಿದೆ. ಮಾತ್ರವಲ್ಲದೇ ಅಮೆರಿಕ ರಾಯಭಾರ ಕಚೇರಿ ವಿಶ್ವದ ಮಾಧ್ಯಮ ಕ್ಷೇತ್ರದ ಸ್ವಾತಂತ್ರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿಯೂ ತಿಳಿಸಿದೆ.
ನವದೆಹಲಿಯಲ್ಲಿರುವ ಅಮೇರಿಕದ ರಾಯಭಾರ ಕಚೇರಿ ತಮ್ಮ ಪ್ರಕಟಣೆಯಲ್ಲಿ ಸಂತಾಪವನ್ನು ವ್ಯಕ್ತಪಡಿಸಿದ್ದು, "ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದನ್ನು ಖಂಡಿಸುತ್ತದೆ. ಗೌರಿ ಲಂಕೇಶ್ ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನಮ್ಮ ಸಂತಾಪಗಳು" ಎಂದು ತಿಳಿಸಿದೆ.