ಮುಂಬೈ, ಸೆ.07: 1993ರ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ವಿಶೇಷ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಮರಣದಂಡನೆ ವಿಧಿಸಿದರೆ ಭೂಗತ ಪಾತಕಿ ಅಬು ಸಲೇಂ ಸೇರಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಮೂರ್ತಿ ಜಿ ಎ ಸನಪ್ ಅಪರಾಧಿಗಳಾದ ಮೊಹಮ್ಮದ್ ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ಗೆ ಮರಣ ದಂಡನೆ ವಿಧಿಸಿದ್ದಾರೆ. ಜೊತೆಗೆ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅಬುಂ ಸಲೇಂ ಮತ್ತು ಕರೀಮುಲ್ಲಾ ಖಾನ್ಗೆ ಜೀವಾವಧಿ ಶಿಕ್ಷೆ ಹಾಗೂ ರಿಯಾಜ್ ಸಿದ್ದಿಕಿಗೆ ಹತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಅಪರಾಧಿಗಳಿಗೆ ಕಾರಾಗೃಹ ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಿರುವ ನ್ಯಾಯಾಲಯ ಆರೋಪಿಗಳ ಮೇಲಿದ್ದ ಕೊಲೆ, ಸ್ಫೋಟ ನಡೆಸಲು ಪಿತೂರಿ, ಶಸ್ತ್ರಾಸ್ತ್ರಗಳ ಪೂರೈಕೆ ಹಾಗೂ ಇತರ ಅಪರಾಧಗಳು ಸಾಬೀತಾಗಿರುವುದಾಗಿ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣದ ಎಲ್ಲಾ ಆರು ಮಂದಿ ಆರೋಪಿಗಳು ತಪ್ಪಿತಸ್ಥರು ಎಂದು ಕಳೆದ ಜೂನ್ 16ರಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಈ ಪೈಕಿ ಮುಸ್ತಫಾ ದೊಸ್ಸಾ ಎಂಬಾತ ಜೂನ್ 28ರಂದು ಮೃತಪಟ್ಟಿದ್ದ.
ಶಿಕ್ಷೆಯ ಪ್ರಮಾಣವು ಘಟನೆ ನಡೆದು ಬರೋಬ್ಬರಿ 24 ವರ್ಷಗಳ ಬಳಿಕ ಮತ್ತು ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತಾದ 80 ದಿನಗಳ ನಂತರ ಪ್ರಕಟವಾಗಿದೆ.
ಮಾರ್ಚ್ 12, 1993ರ ಮಧ್ಯಾಹ್ನದಂದು ವಿವಿಧ ಕಡೆಗಳಲ್ಲಿ ಒಂದರ ಹಿಂದೆ ಒಂದರಂತೆ ಸಂಭವಿಸಿದ 13 ಸರಣಿ ಸ್ಫೋಟಗಳು ದೇಶದ ವಾಣಿಜ್ಯ ರಾಜಧಾನಿ ಮುಂಬೈಯನ್ನು ಛಿದ್ರಗೊಳಿಸಿತ್ತು.
257 ಜನರನ್ನು ಬಲಿಪಡೆದು 700ಕ್ಕೂ ಅಧಿಕ ಮಂದಿಯನ್ನು ಗಾಯಗೊಳಿಸಿದ್ದ ಈ ಅನಿರೀಕ್ಷಿತ ಘಟನೆಯಿಂದ ಇಡೀ ದೇಶವೇ ತಲ್ಲಣಗೊಂಡಿತ್ತು.