ಬೆಂಗಳೂರು: ದುಷ್ಕರ್ಮಿಗಳ ಕೈಯಲ್ಲಿ ಹತ್ಯೆಗೀಡಾಗಿರುವ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಆಕೆಯ ಕಿರಿಯ ಸಹೋದರ, ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಧ್ಯೆ ಎಲ್ಲವೂ ಸರಿಯಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ ಅಕ್ಕನ ಸಾವಿನಿಂದ ತೀವ್ರ ದುಃಖಕ್ಕೀಡಾಗಿರುವ ಇಂದ್ರಜಿತ್ ಲಂಕೇಶ್ ಆಕೆಯನ್ನು ತಾನು ಸದಾ ಗೌರವಿಸುವುದಾಗಿ ತಿಳಿಸಿದ್ದಾರೆ.
ಗೌರಿಗೆ ಯಾರ ಜೊತೆಯೂ ಶತ್ರುತ್ವ ಇರಲಿಲ್ಲ. ಆಕೆಗೆ ಇದ್ದಿದ್ದು ಕೇವಲ ಸೈದ್ಧಾಂತಿಕ ವಿರೋಧಿಗಳಷ್ಟೇ. ಆಕೆ ನಕ್ಸಲ್ ಹಾಗೂ ಬಲಪಂಥೀಯ ಮೂಲಭೂತವಾದಿಗಳ ತನ್ನದೇ ನಿಲುವನ್ನು ಹೊಂದಿದ್ದರು ಎಂದು ಇಂದ್ರಜಿತ್ ತಿಳಿಸಿದ್ದಾರೆ.
ತನ್ನ ಅಕ್ಕನ ಕೆಲಸಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಇಂದ್ರಜಿತ್ ಆಕೆ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಬಹಳಷ್ಟು ಪ್ರಯತ್ನಿಸಿದ್ದರು. ಆಕೆ ನಕ್ಸಲರ ಪುನರ್ವಸತಿ ಬಗ್ಗೆ ಕಾರ್ಯೋನ್ಮುಖರಾಗಿದ್ದರು. ಆದರೆ ಆಕೆ ಕೆಲವೊಂದು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತಂದಾಗ ಅದರ ವಿರುದ್ಧ ಧ್ವನಿಗಳು ಎದ್ದಿದ್ದವು ಮತ್ತು ಆಕೆಯ ವಿರುದ್ಧ ಕರಪತ್ರಗಳನ್ನು ಹಂಚಲಾಗಿತ್ತು ಎಂದು ಇಂದ್ರಜಿತ್ ನೆನಪಿಸಿಕೊಂಡರು.
ಕಳೆದ 14 ವರ್ಷಗಳಿಂದ ಗೌರಿ ತನ್ನ ತಂದೆ ಆರಂಭಿಸಿದ ಲಂಕೇಶ್ ಪತ್ರಿಕೆಯನ್ನು ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ತನ್ನ ಉಳಿತಾಯದ ಹಣದಿಂದಲೇ ನಡೆಸಿಕೊಂಡು ಬಂದಿದ್ದರು. ಆಕೆಯ ದಿಟ್ಟತನವನ್ನು ನಾನು ಎಂದಿಗೂ ಗೌರವಿಸುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.