ಬೆಂಗಳೂರು: ಸೆಪ್ಟಂಬರ್ 6, 2017ರ ಆದೇಶದಲ್ಲಿ ಸಿದ್ಧರಾಮಯ್ಯ ಸರಕಾರವು ರಾಜ್ಯದಲ್ಲಿ ಹೊಸದಾಗಿ 49 ತಾಲೂಕುಗಳ ರಚನೆಗೆ ಅನುಮತಿ ನೀಡಿ ಆಜ್ಞೆ ಹೊರಡಿಸಿದೆ. ಈ ನೂತನ ತಾಲೂಕುಗಳು 2018ರ ಜನವರಿಯಿಂದ ಅಸ್ತಿತ್ವಕ್ಕೆ ಬರಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೊಸದಾಗಿ ಜನ್ಮತಾಳಲಿರುವ ತಾಲೂಕುಗಳ ಪೈಕಿ ದಕ್ಷಿಣ ಕನ್ನಡದಲ್ಲಿ ಮೂಡಬಿದ್ರೆ ಮತ್ತು ಕಡಬ ಹಾಗೂ ಉಡುಪು ಜಿಲ್ಲೆಯಲ್ಲಿ ಬ್ರಹ್ಮಾವರ, ಹೆಬ್ರಿ, ಕಾಪು ಮತ್ತು ಬೈಂದೂರು ಇರಲಿವೆ.
ಈ ಎಲ್ಲಾ ನೂತನ ತಾಲೂಕುಗಳಲ್ಲಿ ತಮ್ಮ ನೂತನ ಕಚೇರಿಗಳನ್ನು ತೆರೆಯುವಂತೆ ಕಂದಾಯ ಇಲಾಖೆಗೆ ಸರಕಾರ ಸೂಚಿಸಿದ್ದು ಇತರ ಇಲಾಖೆಗಳೂ ಹಂತಹಂತವಾಗಿ ತಮ್ಮ ಕಚೇರಿಗಳನ್ನು ತೆರೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
2017-18ರ ಬಜೆಟ್ ಭಾಷಣದ ವೇಳೆ ಭೌಗೋಲಿಕ ಮತ್ತು ಆಡಳಿತ ಅಗತ್ಯಗಳನ್ನು ಪರಿಗಣಿಸಿ ರಾಜ್ಯದಲ್ಲಿ 49 ನೂತನ ತಾಲೂಕುಗಳನ್ನು ಪ್ರಸಕ್ತ ವರ್ಷ ರಚಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ಘೋಷಣೆಯನ್ನೀಗ ಕಾರ್ಯರೂಪಕ್ಕೆ ತರಲಾಗಿದೆ.
ರಾಜ್ಯದಲ್ಲಿ ಸಮರ್ಥ ಮತ್ತು ಪರಿಣಾಮಕಾರಿ ಆಡಳಿತ ನೀಡಲು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಅಸ್ತಿತ್ವದಲ್ಲಿರುವ ತಾಲೂಕುಗಳ ಮರುಸಂಘಟನೆಗಾಗಿ 1973ರಲ್ಲಿ ವಾಸುದೇವ ರಾವ್ ಕಮಿಷನ್, 1984ರಲ್ಲಿ ಟಿಎಂ ಹುಂಡೆಕರ್ ಸಮಿತಿ, 1986ರಲ್ಲಿ ಪಿಸಿ ಗಡ್ಡಿಗೌಡರ್ ಸಮಿತಿ ಹಾಗೂ 2007ರಲ್ಲಿ ಎಂ ಬಿ ಪ್ರಕಾಶ್ ನೇತೃತ್ವದ ತಾಲೂಕು ಮರು ಸಂಘಟನಾ ಸಮಿತಿಯನ್ನು ರಚಿಸಲಾಗಿತ್ತು.
ಈ ಎಲ್ಲಾ ಸಮಿತಿಗಳು 40 ನೂತನ ತಾಲೂಕುಗಳ ರಚನೆಗೆ ಸಲಹೆ ನೀಡಿದ್ದವು. ಆದರೆ ಯಾವ ಸಮಿತಿ ಕೂಡಾ ಉಳಿದ ಹೆಚ್ಚುವರಿ ಒಂಬತ್ತು ತಾಲೂಕುಗಳ ರಚನೆಯ ಬಗ್ಗೆ ಪ್ರಸ್ತಾಪಿಸಿರಲಿಲ್ಲ.
ಪರಿಣಾಮಕಾರಿ ಆಡಳಿತ ನೀಡುವ ಸಲುವಾಗಿ ಸಾಕಷ್ಟು ವಿಸ್ತರಣೆ ಹೊಂದಿರುವ ಮತ್ತು ಜನಸಂಖ್ಯೆ ಹೊಂದಿರುವ ನೂತನ ತಾಲೂಕುಗಳನ್ನು ರಚಿಸುವುದು ಅಗತ್ಯವಾಗಿದೆ. ಇದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಗ್ರಾಮಸ್ಥರನ್ನು ಭೇಟಿ ಮಾಡಲು ಸಹಾಯವಾಗುತ್ತದೆ. ಅದರಿಂದ ಗ್ರಾಮಸ್ಥರು ತಾಲೂಕು ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಲೂ ನೆರವಾಗುತ್ತದೆ. ಹಾಗಾಗಿ ಸದ್ಯಯಿರುವ ತಾಲೂಕುಗಳ ಮರುಸಂಘಟನೆಯ ಅಗತ್ಯವಿದೆ ಎಂದು ಸರಕಾರದ ಗಮನಕ್ಕೆ ಬಂದ ಕಾರಣ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ತಾಲೂಕುಗಳ ಪಟ್ಟಿ:
ದಕ್ಷಿಣ ಕನ್ನಡ: ಮೂಡಬಿದ್ರೆ, ಕಡಬ
ಉಡುಪಿ: ಬ್ರಹ್ಮಾವರ, ಕಾಪು, ಹೆಬ್ರಿ, ಬೈಂದೂರು
ಬಾಗಲಕೋಟೆ: ಗುಲೆದ್ಗುಡ್ಡ, ರಬಕವಿ-ಬನಹಟ್ಟಿ, ಇಲ್ಕಲ್
ಬೆಳಗಾವಿ: ನಿಪ್ಪಾಣಿ, ಕಾಗ್ವಾಡ್
ಚಾಮರಾಜನಗರ: ಹನೂರ್
ದಾವಣಗೆರೆ: ನ್ಯಾಮತಿ
ಬೀದರ್: ಚಿಟಗುಪ್ಪ, ಹುಲಸೂರ್, ಕಮಲನಗರ
ಬಳ್ಳಾರಿ: ಕುರುಗೋಡು, ಕೊಟ್ಟೂರು, ಕಂಪ್ಲಿ
ಧಾರವಾಡ: ಅಣ್ಣಿಗೇರಿ, ಅಲ್ನವರ್, ಹುಬ್ಬಳ್ಳಿ ನಗರ
ಗದಗ: ಗಜೇಂದ್ರಘಡ, ಲಕ್ಷ್ಮೀಶ್ವರ
ಕಲಬುರ್ಗಿ: ಕಲಗಿ, ಕಮಲಪುರ, ಯೆದ್ರಾವಿ, ಶಹಾಬಾದ್
ಯಾದಗಿರಿ: ಹುನಸಗಿ, ವಡಗೆರ, ಗುರ್ಮಿತ್ಕಲ್
ಕೊಪ್ಪಳ: ಕುಕನೂರು, ಕನಕಗಿರಿ, ಕರಟಗಿ
ರಾಯಚೂರು: ಮಸ್ಕಿ, ಸಿರ್ವಾರ್
ಬೆಂಗಳೂರು ನಗರ: ಯಲಹಂಕ
ವಿಜಯಪುರ: ಬಬಲೇಶ್ವರ, ನಿದಗುಂಡಿ, ತಿಕೋಟಾ, ದೇವರ ಹಿಪ್ಪರಗಿ, ತಾಳಿಕೋಟ, ಚಡ್ಚನ, ಕೊಲ್ಹರ್
ಹಾವೇರಿ: ರಟ್ಟಿಹಳ್ಳಿ
ಮೈಸೂರು: ಸರಗೂರ್
ಚಿಕ್ಕಮಗಳೂರು: ಅಜ್ಜಂಪುರ
ಉತ್ತರ ಕನ್ನಡ: ದಾಂಡೇಲಿ
ಕೋಲಾರ: ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್)