ಮಂಗಳೂರು, ಸೆ.8: ಕ್ರೈಸ್ತ ಬಾಂಧವರಿಗಿಂದು ಸಂಭ್ರಮದ ದಿನ. ಕರಾವಳಿಯ ಜೆಲ್ಲೆಗಳಲ್ಲಿ ಮಾತೆ ಮರಿಯಮ್ಮನವರ ಜನುಮ ದಿನವನ್ನು ಮೊಂತಿ ಹಬ್ಬ ಎಂದು ಆಚರಿಸಲಾಗುತ್ತದೆ. ಹೊಸ ತೆನೆಯನ್ನು ಮನೆ ತುಂಬಿಸಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರಕೃತಿಮಾತೆಯನ್ನು ದೇವಮಾತೆಯನ್ನಾಗಿ ಈ ಹಬ್ಬದ ದಿನ ಕಾಣಲಾಗುತ್ತದೆ.
ಮೊಂತಿ ಹಬ್ಬ ಅಥಾವ ತೆನೆ ಹಬ್ಬ ಎಂದು ಕರೆಸಿಕೊಳ್ಳುವ ಹಬ್ಬ ಬಂತೆಂದರೆ ಕ್ರಿಶ್ಚಿಯನ್ ಸಮುದಾಯದವರ ಪಾಲಿಗೆ ಸಂಭ್ರಮದ ದಿನ. ಈ ಹಬ್ಬಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಮೊಂತಿ ಹಬ್ಬದ ದಿನ ಚರ್ಚುಗಳಲ್ಲಿ ದಿವ್ಯ ಬಲಿಪೂಜೆಯನ್ನುಭಕ್ತಿಯಿಂದ ನಡೆಸಿ, ಮಾತೆ ಮರಿಯಮ್ಮನಿಗೆ ವಿಜೃಂಭಣೆಯಿಂದ ಪುಷ್ಪ ಅರ್ಪಿಸಲಾಗುತ್ತದೆ. ಸಾಮಾನ್ಯವಾಗಿ ಒಂಭತ್ತು ದಿನಗಳ ಕಾಲ ಈ ಹಬ್ಬದ ಆಚರಣೆ ಇರುತ್ತದೆ. ಹಬ್ಬದ ಒಂಭತ್ತು ದಿನಗಳ ಮುಂಚೆ ಕ್ರಿಶ್ಚಿಯನ್ ಸಮುದಾಯದವರು ಚರ್ಚುಗಳಿಗೆ ತೆರಳಿ ಮಾತೆ ಮರಿಯಮ್ಮನವರಿಗೆ ಪುಷ್ಪ ಅರ್ಚಣೆ ಮಾಡಿ ಭಕ್ತಿಯಿಂದ ಆರಾಧನೆ ಮಾಡುತ್ತಾರೆ.
ಸತತ ಒಂಭತ್ತು ದಿನಗಳ ಕಾಲ ಮರಿಯಮ್ಮನವರನ್ನು ಭಕ್ತಿಯಿಂದ ಆರಾಧಿಸುವ ಕ್ರಿಶ್ಚಿಯನ್ ಸಮುದಾಯದವರಿಗೆ ಹಬ್ಬದ ಕೊನೆಯ ದಿನ ಅಂದರೆ ಮಾತೆಯ ಜನುಮ ದಿನದಂದು ಹೊಸ ಭತ್ತದ ತೆನೆಯನ್ನು ಚರ್ಚುಗಳಲ್ಲಿ ನೀಡಲಾಗುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಹೊಸ ಅಕ್ಕಿ ಊಟ ಮಾಡುವ ಮೂಲಕ ಹಬ್ಬದ ಸವಿಯುಣ್ಣುತ್ತಾರೆ. ಯಾವ ರೀತಿ ಮಾತೆ ಮರಿಯಮ್ಮನವರು ಯೇಸು ಕ್ರಿಸ್ತರ ವಿಮೋಚನೆಯ ಪ್ರಥಮ ಫಲವೋ, ಪೃಕೃತಿಮಾತೆಯು ನೀಡಿದ ಮೊದಲ ಫಲವನ್ನು ಕುಟುಂಬದ ಸದಸ್ಯರೆಲ್ಲರೂ ಜೊತೆಯಾಗಿ ಸೇವಿಸುವುದು ಈ ಹಬ್ಬದ ಸಂಪ್ರದಾಯ.