ಮಂಗಳೂರು, ಸೆ.8: ಬಿಜೆಪಿ ಯುವಾ ಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಪ್ರತಿಭಟನಾ ಸಮಾವೇಶಕ್ಕೆ ನೆಹರೂ ಮೈದಾನದಲ್ಲಿ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಪ್ರತಿಭಟನಕಾರರು ಆದೇಶವನ್ನು ಉಲ್ಲಂಘಿಸಿ ಅಂಬೆಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಬಿಜೆಪಿ ನಾಯಕರ ವಿರುದ್ದ ಬಂದರು ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ.
ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಈಶ್ವರಪ್ಪ, ಪ್ರಹ್ಲಾದ್ ಜೋಷಿ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವಾರು ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಂಬೆಡ್ಕರ್ ವೃತ್ತದಲ್ಲಿ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿದ್ದ ವೇದಿಕೆ, ಬ್ಯಾನರ್, ಸೌಂಡ್ ಬಾಕ್ಸ್, ೨ ಲಾರಿಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇಷ್ಟೇ ಅಲ್ಗದೇ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೂ ಹಾನಿಗೈಯಲಾಗಿದೆ. ಈ ಆರೋಪದಡಿ ೨೦೦ ಕಾರ್ಯಕರ್ತರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.