ಮಂಗಳೂರು,ಸೆ 08: ಭಾರತೀಯ ಜನತಾ ಪಕ್ಷ ಗುರುವಾರ ನಗರದಲ್ಲಿ ಆಯೋಜಿಸಿದ್ದ ‘ಮಂಗಳೂರು ಚಲೋ” ರ್ಯಾಲಿಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡ ಪೊಲೀಸ್ ಇಲಾಖೆಯ ಬಗ್ಗೆ ನಾಗರಿಕರಿಂದ ಭರಪೂರ ಶ್ಲಾಘನೆ ವ್ಯಕ್ತವಾಗಿದೆ.
ಕೆಲವು ಮತೀಯ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿ ಮತ್ತು ಹಿಂದೂ ಯುವಕರ ಹತ್ಯೆಯನ್ನು ಖಂಡಿಸಿ ಬಿಜೆಪಿ ಗುರುವಾರದಂದು ಆಯೋಜಿಸಿದ್ದ ಮಂಗಳೂರು ಚಲೋ ರ್ಯಾಲಿಯಲ್ಲಿ ಸುಮಾರು ಐದು ಸಾವಿರ ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಒಂದು ಹಂತದಲ್ಲಿ ಪ್ರತಿಭಟನಾಕಾರರು ದಾಂಧಲೆ ನಡೆಸಿ ಪೊಲೀಸರು ರಸ್ತೆಗಳಲ್ಲಿ ಇಟ್ಟಿದ್ದ ಬ್ಯಾರಿಕೇಡ್ ಗಳನ್ನು ದಾಟಿದಾಗ ಸ್ಥಳದಲ್ಲಿ ಸ್ವಲ್ಪ ಮಟ್ಟಿನ ಆತಂಕ ಸೃಷ್ಟಿಯಾದರೂ ಪೊಲೀಸರು ತಾಳ್ಮೆಯಿಂದ ವರ್ತಿಸಿ ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಂಡರು.
‘ಮಂಗಳೂರು ಚಲೋ’ ಜಾಥಾವನ್ನು ವರದಿ ಮಾಡಲು ಮೈಸೂರಿನಿಂದ ಆಗಮಿಸಿದ್ದ ಪತ್ರಕರ್ತರೊಬ್ಬರ ಪ್ರಕಾರ, ಕಾರ್ಯಕ್ರಮದ ವೇಳೆ ಹಲವಾರು ಬಾರಿ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆಗಳಿದ್ದರೂ ಪೊಲೀಸರು ತಾಳ್ಮೆಯಿಂದ ವರ್ತಿಸಿ ಪ್ರತಿಭಟನಾಕಾರರನ್ನು ನಿಭಾಯಿಸಿದರು. ಅವರು ಹಾಗೆ ನಡೆದುಕೊಳ್ಳದೆ ಇರುತ್ತಿದ್ದಲ್ಲಿ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು. ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ದಾಟುವ ವೇಳೆ ಸಂಘರ್ಷವೇರ್ಪಟ್ಟು ಕೆಲವು ಪೊಲೀಸರಿಗೆ ಗಾಯವಾದರೆ ಇನ್ನೂ ಕೆಲವರ ಸಮವಸ್ತ್ರ ಹರಿದಿತ್ತು ಆದರೂ ಪೊಲೀಸರು ಸಂಯಮದಿಂದ ವರ್ತಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.
ಮಂಗಳೂರು ನಗರ ಮಾಜಿ ಪೊಲೀಸ್ ಕಮೀಷನರ್ ಚಂದ್ರಶೇಖರ್ ಭದ್ರತಾ ವ್ಯವಸ್ಥೆಯ ಮೇಲುಸ್ತುವಾರಿ ನೋಡಿಕೊಂಡಿದ್ದರು. ಮಂಗಳೂರು ಪೊಲೀಸ್ ಆಯುಕ್ತ ಟಿ ಸುರೇಶ್ ಅವರ ನೇತೃತ್ವದಲ್ಲಿ ನಿಯೋಜಿಸಲಾಗಿದ್ದ ಪೊಲೀಸ ತಂಡ ಯಾವುದೇ ಅಹಿತಕರ ಘಟನೆಯನ್ನು ನಿಭಾಯಿಸಲು ಸನ್ನದ್ಧವಾಗಿತ್ತು. ಇಡೀ ದೇಶದ ಕಣ್ಣು ಮಂಗಳೂರಿನ ಮೇಲಿದ್ದ ಸಂದರ್ಭದಲ್ಲಿ ಮಂಗಳೂರು ಪೊಲೀಸರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರು.
ಮಂಗಳೂರು ಚಲೋ ಅಭೂತಪೂರ್ವ ಯಶಸ್ಸು ಕಂಡಿತು ಎಂದು ಬಿಜೆಪಿ ಹೇಳಿಕೊಂಡಿದ್ದರೆ ಅದೊಂದು ಫ್ಲಾಪ್ ಶೋ ಎಂದು ಕಾಂಗ್ರೆಸ್ ಹಾಗೂ ಇತರ ರಾಜಕೀಯ ಪಕ್ಷಗಳು ಕುಹಕವಾಡಿವೆ.