ತಿರುವನಂತಪುರಂ: ಕೇರಳ ಮೂಲದ ನರ್ಸ್ ಒಬ್ಬರು ಆಸ್ಟ್ರೇಲಿಯಾದಲ್ಲಿ ಜೈಲುಪಲಾದ ಬಗ್ಗೆ ವರದಿಯಾಗಿದೆ. ಆಸ್ಟ್ರೇಲಿಯಾದ ಮೆಲ್ಬೊರ್ನ್ ನಗರದಲ್ಲಿ ವಾಸವಾಗಿರುವ ಡಿಂಪಲ್ ಗ್ರೇಸ್ ಥಾಮಸ್ ಎಂಬಾಕೆಯೇ ವಿದೇಶದಲ್ಲಿ ಕಾರಾಗೃಹವಾಸಕ್ಕೆ ಒಳಗಾದ ಮಹಿಳೆ.
ಕಳೆದ ವರ್ಷ ಡಿಂಪಲ್ ಚಲಾಯಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಓರ್ವ ಮಹಿಳೆಯ ಗರ್ಭದಲ್ಲಿದ್ದ ಮಗು ಮೃತಪಟ್ಟಿತ್ತು. ಈ ಅಪಘಾತಕ್ಕೆ ಡಿಂಪಲ್ ಅವರನ್ನು ಜವಾಬ್ದಾರರನ್ನಾಗಿಸಿದ ನ್ಯಾಯಾಲಯ ಆಕೆಗೆ ಎರಡೂವರೆ ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆಕೆ ಹದಿನೈದು ತಿಂಗಳುಗಳನ್ನು ಜೈಲಿನಲ್ಲಿ ಕಳೆದ ನಂತರವಷ್ಟೇ ಆಕೆಗೆ ಪೆರೊಲ್ ಸಿಗುವ ಸಾಧ್ಯತೆಯಿದ್ದು ನಂತರ ಆಕೆಯನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಮೂಲತಃ ಕಣ್ಣೂರು ನಿವಾಸಿ 31ರ ಹರೆಯದ ಡಿಂಪಲ್ ಕಾರು ಆಸ್ಟ್ರೇಲಿಯನ್ ಪ್ರಜೆ ಆಶ್ಲಿ ಅಲೆನ್ ಎಂಬಾಕೆಯ ಕಾರಿಗೆ ಗುದ್ದಿದ ಪರಿಣಾಮ ಆಕೆಯ ಹೊಟ್ಟೆಯಲ್ಲಿ 28 ವಾರಗಳ ಮಗು ಮೃತಪಟ್ಟಿತ್ತು.
ಡಿಂಪಲ್ ಟ್ರಾಫಿಕ್ ದಟ್ಟಣೆ ತಪ್ಪಿಸುವ ಸಲುವಾಗಿ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ಕಾರ್ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆಕೆಗೆ ಶಿಕ್ಷೆ ವಿಧಿಸಿರುವುದಾಗಿ ತೀರ್ಪಿನಲ್ಲಿ ತಿಳಿಸಲಾಗಿದೆ.