ಕಲಬುರ್ಗಿ: ಪ್ರಪಂಚ ಎಷ್ಟು ಮುಂದುವರಿದರೂ ನಮ್ಮ ದೇಶದಲ್ಲಿ ಮೇಲು-ಕೀಳೆಂಬ ಅಸಮಾನತೆ ಇಂದಿಗೂ ರಾರಾಜಿಸುತ್ತಿದೆ ಎಂಬುದಕ್ಕೆ ಕಲಬುರ್ಗಿಯಿಂದ ವರದಿಯಾಗಿರುವ ವರದಿ ಸಾಕ್ಷಿ ನುಡಿಯುತ್ತದೆ.
ಇಲ್ಲಿನ ಜೇವರ್ಗಿ ತಾಲೂಕಿನಲ್ಲಿರುವ ಚನ್ನೂರಿನ ಬಾವಿಯೊಂದರ ನೀರನ್ನು ಉದ್ದೇಶಪೂರ್ವಕವಾಗಿ ಕಲುಷಿತಗೊಳಿಸಲಾಗಿದೆ. ದಲಿತರು ಈ ಬಾವಿಯಿಂದ ದೂರವುಳಿಯಬೇಕು ಎಂಬ ಏಕೈಕ ಉದ್ದೇಶದಿಂದ ಮೇಲ್ಜಾತಿಯ ಜನರೇ ಈ ಬಾವಿಗೆ ವಿಷ ಹಾಕಿ ಮಲಿನಗೊಳಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಒಂದು ವಾರದ ಹಿಂದೆ ಈ ಬಗ್ಗೆ ದೂರು ದಾಖಲಾಗಿದ್ದು ಸೆಪ್ಟಂಬರ್ ಏಳರಂದು ಗ್ರಾಮಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಮುಖ್ಯಸ್ಥ ಎ ಮುನಿಯಪ್ಪ ಘಟನೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಮತ್ತು ಬಾವಿಯನ್ನು ತಮ್ಮ ಸುಪರ್ದಿಗೆ ಪಡೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು.
ವಿವಾದಿತ ಬಾವಿಯು ಅಮಲಪ್ಪ ಮಾಂಗ್ ಎಂಬವರಿಗೆ ಸೇರಿದ ಜಮೀನಿನಲ್ಲಿದ್ದು ದಲಿತ ಸಮುದಾಯಕ್ಕೆ ಸೇರಿದ ಇವರು ಮೇಲ್ವರ್ಗದ ಗೊಲ್ಲಲಪ್ಪ ಗೌಡ ಕುಕನೂರ್ ಎಂಬಾತನಿಗೆ ಈ ಭೂಮಿಯನ್ನು ಕೆಲವರ್ಷಗಳ ಹಿಂದೆ ಲೀಸ್ ಗೆ ನೀಡಿದ್ದರು.
ಸ್ಥಳೀಯರು ಹೇಳುವಂತೆ ಲೀಸ್ ಗೆ ನೀಡಲ್ಪಟ್ಟ ನಂತರ ಈ ಜಮೀನಿನಲ್ಲಿದ್ದ ಬಾವಿಯಿಂದ ದಲಿತರು ದೂರವುಳಿಯುವಂತೆ ಮಾಡಲು ಮೇಲ್ವರ್ಗದ ಜನರು ಹಲವು ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ.
ಆಗಸ್ಟ್ 31ರಂದು ಸ್ಥಳೀಯ ದಲಿತ ವ್ಯಕ್ತಿ ಮಹಂತಪ್ಪ ಎಂಬಾತ ಈ ಬಾವಿಯಿಂದ ನೀರು ಸಂಗ್ರಹಿಸಲು ತೆಳಿದಾಗ ನೀರಿನಲ್ಲಿ ಎಣ್ಣೆಯಂಥಾ ಪದರಗಳು ತೇಲಾಡುತ್ತಿರುವುದು ಪತ್ತೆಯಾಗಿದೆ. ಅಪಾಯದ ಸುಳಿವು ಸಿಕ್ಕ ಆತ ಕೂಡಲೇ ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾನೆ.
ಜೇವರ್ಗಿ ತಾಲೂಕಿನ ತಹಶೀಲ್ದಾರ್ ಯೆಲ್ಲಪ್ಪ ಸುಬೇದಾರ್, ಬಾವಿಯ ನೀರು ಕಲುಷಿತಗೊಂಡಿರುವ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಆ ಬಾವಿಯ ನೀರನ್ನು ಖಾಲಿ ಮಾಡುವ ಸಲುವಾಗಿ ತಂಡವನ್ನು ನಿಯೋಜಿಸಿದ್ದಾಗಿ ತಿಳಿಸಿದ್ದಾರೆ. ಈ ಬಾವಿಯ ನೀರನ್ನು ಪರೀಕ್ಷೆಗೊಳಪಡಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ನೀರಿನಲ್ಲಿ ನಿಷೇಧಿತ ಕೀಟನಾಶಕ ಎಂಡೋಸಲ್ಫಾನ್ ಇರುವುದಾಗಿ ತಿಳಿಸಿದ್ದಾರೆ.
ಆದರೆ ಪೊಲೀಸರು ಸದ್ಯ ವಿಧಿವಿಜ್ಞಾನ ಇಲಾಖೆಯ ವರದಿಗಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದು ಗೊಲ್ಲಲಪ್ಪ ಗೌಡ ಕುಕನೂರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧ ದೌರ್ಜನ್ಯ ತಡೆ ಕಾಯಿದೆಯಡಿ ದೂರು ದಾಖಲಿಸಿದ್ದಾರೆ.
ವರದಿಗಳ ಪ್ರಕಾರ ಈ ಹಿಂದೆಯೂ ವಿವಾದಿತ ಬಾವಿಗೆ ನಾಯಿ, ಬೆಕ್ಕು, ಹಾವು ಮುಂತಾದ ಪ್ರಾಣಿಗಳ ಶವಗಳನ್ನು ಎಸೆಯಲಾಗುತ್ತಿದ್ದು ಇವೆಲ್ಲವೂ ದಲಿತರು ಈ ಬಾವಿಯ ನೀರನ್ನು ಉಪಯೋಗಿಸದಂತೆ ಮಾಡಲು ನಡೆಸಲಾಗುತ್ತಿದ್ದ ಪಿತೂರಿಗಳಾಗಿದ್ದವು.