ಮಂಗಳೂರು, ಸೆ.೮: ಮಂಗಳೂರು ಚಲೋ ಹಿನ್ನೆಲೆಯಲ್ಲಿ ನಗರದ ಕದ್ರಿ ಪೋಲೀಸ್ ಠಾಣಾ ಇನ್ಸ್ಪೆಕ್ಟರ್ ಮಾರುತಿ ನಾಯಕ್ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸಾರ್ವಜನಿಕವಾಗಿ ದೌರ್ಜನ್ಯವನ್ನು ಎಸಗಿದ್ದು ಮಾತ್ರವಲ್ಲದೇ ನಿನ್ನ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಸಂಸದರ ಈ ವರ್ತನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಖಂಡಿಸಿದ್ದಾರೆ.
ಮಂಗಳೂರು ಚಲೋಗೆ ಜಿಲ್ಲಾಡಳಿತ ಯಾವುದೇ ಅನುಮತಿ ನೀಡದಿದ್ದರೂ, ಆದೇಶವನ್ನು ಧಿಕ್ಕರಿಸಿ ಪ್ರತಿಭಟನೆಯನ್ನು ಮಾಡುವುದರ ಮೂಲಕ ಸಂಸದರು ಗೂಂಡವರ್ತನೆ ಮಾಡುತ್ತಿದ್ದಾರೆ. ಕೋಣಾಜೆ ಠಾಣೆಯಲ್ಲಿ ಜಿಲ್ಲೆಗೆ ಬೆಂಕಿ ಇಡುತ್ತೇವೆ ಎಂದು ಹೇಳಿಕೆ ಕೋಟ್ಟ ಸಂಸದರ ವರ್ತನೆ ಇದು ಮೊದಲಲ್ಲ. ದೊಡ್ಡಹುದ್ದೆಯಲ್ಲಿ ಇದ್ದುಕೊಂಡು ಜಿಲ್ಲೆಯಲ್ಲಿ ಶಾಂತಿಯನ್ನುಕಾಪಾಡುವ ಬದಲು ಅಶಾಂತಿಯನ್ನು ಸೃಷ್ಟಿಸಿದ್ದಾರೆ. ಕಷ್ಟಪಟ್ಟು ಕಲಿತು ಪೊಲೀಸ್ ಹುದ್ದೆಯನ್ನು ಪಡೆದು ಕಾನೂನು ಕಾಪಾಡುವ ಕೆಲಸವನ್ನು ಮಾಡುತ್ತಿರುವವರ ಮೇಲೆ ಒರ್ವ ಸಂಸದರಾಗಿ ಇಂತಹ ಗೂಂಡಾಗಿರಿ ಪ್ರದರ್ಶಿಸಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಇಂತಹ ಪ್ರತಿಭಟನೆಗಳನ್ನು ನಿಲ್ಲಿಸಬೇಕು. ಸಂಸದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.