ಬೆಂಗಳೂರು, ಸೆ.೮: ಸ್ಯಾಂಡಲ್ ವುಡ್ ನ ಹಿರಿಯ ನಟ ಆರ್ ಎನ್ ಸುದರ್ಶನ್ ಇಂದು ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುದರ್ಶನ್ ಅವರು ಬೆಂಗಳೂರಿನ ತಿಲಕ್ ನಗರದಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮನೆಯಲ್ಲಿ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದ ಸುದರ್ಶನ್ ಅವರನ್ನ ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಆರ್ ಎನ್ ಸುದರ್ಶನ್ ಸಾವನ್ನಪ್ಪಿದ್ದಾರೆ.
ಸದ್ಯ ಸುದರ್ಶನ್ ಅವರು ಕಲ್ಲರ್ಸ್ ಕ್ನನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸ್ವಾಮೀಜಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಕಲಾಭೂಮಿಯಲ್ಲಿ ಸಾಕಷ್ಟು ಪಳಗಿರುವ ಸುದರ್ಶನ್ ಅವರು ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ವಿಜಯನಗರ ವೀರಪುತ್ರ, ನಗುವ ಹೂವು, ಮರೆಯಾದ ದೀಪಾವಳಿ, ಮಠ, ಸೂಪರ್ ಹೀಗೆ ಅನೇಕ ಚಿತ್ರಗಳಲ್ಲಿ ಸುದರ್ಶನ್ ನಟಿಸಿದ್ದರು.